ಕೃಷಿ ವಿಜ್ಞಾನಿಗಳು, ಕೃಷಿ – ತೋಟಗಾರಿಕಾ ಅಧಿಕಾರಿಗಳ ಜೊತೆ ಶಿರಸಿ ಸ್ಕೋಡ್‌ವೆಸ್ ಸಂಸ್ಥೆ ಸಿಬ್ಬಂದಿ ಶನಿವಾರ ಗದ್ದೆಗೆ ಇಳಿದು ನಾಟಿ ಮಾಡಿದರು. ಉಂಚಳ್ಳಿಯ ಸರಸ್ವತಿ ಫಾರಂ’ನಲ್ಲಿನ 5 ಎಕರೆ ಪ್ರದೇಶದಲ್ಲಿ 22 ಬಗೆಯ ಭತ್ತಗಳನ್ನು ರೈತರ ಸಹಭಾಗಿತ್ವದಲ್ಲಿ ಬಿತ್ತನೆ ( Agriculture festival ) ಮಾಡಲಾಯಿತು. ಇದಾದ ನಂತರ ಎಲ್ಲರೂ ಒಟ್ಟಿಗೆ ಸೇರಿ ಗ್ರಾಮೀಣ ಊಟದ ಸೊಬಗು ಸವಿದರು.
ಸಾವಯವ ಕೆಂಪಕ್ಕಿಯ ಅನ್ನದ ಜೊತೆ ಸ್ಥಳೀಯ ಆಹಾರಗಳಾದ ಕಡ್ಲೆಮಡ್ಡಿ, ಹಲಸಿನ ಹಪ್ಪಳ, ಸವತೆಕಾಯಿ ಖರಿ, ಬೂತ್ಗೊಜ್ಜು, ಬಗೆಬಗೆ ತರಕಾರಿಯ ಪಲ್ಯದ ಊಟಕ್ಕೆ ಹಲವರು ಮನಸೋತರು. ಗದ್ದೆ ಹಾಳಿಯ ಮೇಲೆ ಕುಳಿತು ಅನೇಕ ಗಣ್ಯರು ಊಟ ಮಾಡಿದರು. ಸಾವಯವ ಕೃಷಿ ಪದ್ಧತಿಯ ಮೂಲಕ ಸಾಂಪ್ರದಾಯಿಕ ಕೃಷಿಗೆ ಒತ್ತು ನೀಡುವ ಉದ್ದೇಶದಿಂದ ನಡೆದ ನಾಟಿ ಹಬ್ಬ ಆಯೋಜಿಸಲಾಗಿದ್ದು, ನಾಟಿಗೆ ಇಳಿದವರ ತಲೆಯ ಮೇಲಿನ ಟೊಪ್ಪಿ, ಬಾಯಲ್ಲಿನ ಕವಳ ಸಹ ಗ್ರಾಮೀಣ ಸೊಬಗಿಗೆ ಮೆರಗು ನೀಡಿತ್ತು. ಪ್ರಾರಂಭದಲ್ಲಿ ಸಂಪ್ರದಾಯದ0ತೆ ಮೊದಲು ಗೋ ಪೂಜೆ ನಡೆಸಲಾಯಿತು. ಹಸುವಿಗೆ ಗೋ ಗ್ರಾಸ ನೀಡುವ ಮೂಲಕ ಹಬ್ಬ ಶುರುವಾಯಿತು. ನೇಗಿಲು, ನೊಗ ಹಾಗೂ ಅಗೆ ಪೂಜೆಯನ್ನು ಸ್ಕೋಡ್‌ವೆಸ್ ಮುಖ್ಯಸ್ಥ ವೆಂಕಟೇಶ್ ನಾಯ್ಕ ನೆರವೇರಿಸಿದರು.
ಗಜಮಿನಿ, ಶೋಬಿನಿ, ಮೈಸೂರು ಮಗ, ಕಗ್ಗ, ರಾಜಮುಡಿ, ಮಂಜಗುಣಿ ಸಣ್ಣ ಸೇರಿ ಪಾರಂಪರಿಕ ಅಳಿವಿನಂಚಿನಲ್ಲಿರುವ ಭತ್ತದ ಗಿಡಗಳನ್ನು ಇಲ್ಲಿ ನಾಟಿ ಮಾಡಲಾಗಿದ್ದು, ಅಂದಾಜು 12 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆಯಿದೆ. ರೈತರಿಗೆ ಉತ್ತಮ ತಳಿಯ ಸಾಂಪ್ರದಾಯಿಕ ಬೀಜ ದೊರೆಯಬೇಕು. ರೈತರಿಗೆ ಬೀಕಾದ ಬೀಜ ಬ್ಯಾಂಕ್ ಮಾಡಬೇಕು ಎಂಬ ಉದ್ದೇಶದಿಂದ ಬಿತ್ತನೆ ಮಾಡಲಾಗಿದ್ದು, ರೈತರು ಸಹ ಉತ್ಸಾಹದಿಂದ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕ ಟಿ ಎಚ್ ನಟರಾಜ, ಕೃಷಿ ವಿಜ್ಞಾನ ಕೇಂದ್ರದ ರೂಪಾ ಪಾಟೀಲ್, ಸ್ಕೊಡ್‌ವೆಸ್ ಉಪಾಧ್ಯಕ್ಷ ಕೆ ವಿ ಖೂರ್ಸೆ, ಸ್ಕೊಡ್‌ವೆಸ್ ಸಂಸ್ಥೆಯ ಆಡಳಿತ ಮತ್ತು ಮುಖ್ಯ ಹಣಕಾಸು ಅಧಿಕಾರಿ ಸರಸ್ವತಿ ಎನ್ ರವಿ, ಸಂಸ್ಥೆಯ ನಿರ್ದೇಶಕ ಕೆ. ಎನ್. ಹೊಸ್ಮನಿ ಈ ನಾಟಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡರು.
ನಾಟಿ ಹಬ್ಬ ಹೇಗಿತ್ತು? ವಿಡಿಯೋ ಇಲ್ಲಿ ನೋಡಿ..








