ಪ್ರತಿ ಊರು-ಮನೆಯಲ್ಲಿಯೂ ಇದೀಗ ದೀಪಾವಳಿ ಸಂಭ್ರಮ. ದೀಪಾವಳಿ – ತುಳಸಿ ಮದುವೆಗೆ ಎಲ್ಲಡೆ ತಯಾರಿ ಜೋರಾಗಿದೆ.ಹಬ್ಬದ ಖರೀದಿಯೂ ನಡೆಯುತ್ತಿದೆ. ನಿಮ್ಮ ಖರೀದಿಯಲ್ಲಿ ಮಣ್ಣಿನ ಹಣತೆಯೂ ಇರಲಿ. ಆ ಮೂಲಕ ಬಡ ವ್ಯಾಪಾರಿಗಳು ಖುಷಿಯಿಂದ ಹಬ್ಬ ಆಚರಿಸುವಂತಾಗಲಿ!
ಬಹುತೇಕ ವ್ಯಾಪಾರಿಗಳು ಸ್ವಂತ ಹಣತೆ ತಯಾರಿಸುತ್ತಾರೆ. ಅವರ ಮನೆಯಲ್ಲಿನ ಸದಸ್ಯರೇ ಸೇರಿಕೊಂಡು ಸ್ವತಃ ಹಣತೆ ಮಾಡಿ ಮಾರುಕಟ್ಟೆಗೆ ತರುತ್ತಾರೆ. ನಾಲ್ಕರಿಂದ ಹತ್ತು ಬಗೆಯ ವಿವಿಧ ಆಕಾರದ ಹಾಗೂ ಗಾತ್ರದ ಹಣತೆಗಳು ಕಾಣಿಸುತ್ತಿವೆ. ಹೆಬ್ಬೆರಳು ಗಾತ್ರದ ಹಣತೆಯಿಂದ ಹಿಡಿದು ಎರಡು ಬೊಗಸೆ ಗಾತ್ರದ ಹಣತೆಯವರೆಗೂ ಮಾರುಕಟ್ಟೆಯಲ್ಲಿದೆ. ಅದರಲ್ಲಿಯೂ ಮಳೆಯ ನೀರು ದೀಪದ ಮೇಲೆ ಬಿದ್ದು ದೀಪ ಆರದಂತೆ ಮೇಲಿಂದ ಹೊಡಿಕೆಯ ತೆಂಗಿನಕಾಯಿಯ ಆಕೃತಿಯ ದೀಪಗಳು ವಿಶೇಷವಾಗಿವೆ.
ಪ್ರಮುಖ ಪಟ್ಟಣಗಳಿಗೆ ದೀಪಾವಳಿ ಹಣತೆ ಆಗಮಿಸಿದ್ದು, ಬಡ ವ್ಯಾಪಾರಿಗಳು ರಸ್ತೆ ಅಂಚಿನಲ್ಲಿ ಕೂತು ಹಣತೆ ಮಾರುತ್ತಿದ್ದಾರೆ. ಅವರ ಬಳಿ ನೀವು ಖರೀದಿಸುವ ಪ್ರತಿ ಹಣತೆಯೂ ಬಡವರ ಮನೆಯಲ್ಲಿ ಸಂತಸದ ದೀಪಾವಳಿ ಆಚರಿಸಲು ಅವಕಾಶ ಕೊಡುತ್ತದೆ. ಹೀಗಾಗಿ ಆಡಂಬರದ ಪ್ಲಾಸ್ಟಿಕ್ ಅಲಂಕಾರದ ಬದಲು ಮಣ್ಣಿನ ದೀಪಗಳ ಅಲಂಕಾರಕ್ಕೆ ನಿಮ್ಮ ಆದ್ಯತೆಯಿರಲಿ. ಹಣತೆಯನ್ನು ಕೊಳ್ಳುವುದರಿಂದ ಬಡ ವ್ಯಾಪಾರಿಗಳ ಹಬ್ಬ ಆಚರಣೆಯಲ್ಲಿ ನಾವು ಭಾಗಿಯಾಗೋಣ!