ಕಾರವಾರ: ಮಕ್ಕಳ ಕಳ್ಳ ಸಾಗಾಣಿಕಾ ದಂಧೆಯಲ್ಲಿ ತೊಡಗಿದ್ದ ಎಂಟು ಮಹಿಳೆಯರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆ ಮಹಿಳೆಯರು ನೀಡಿದ ಮಾಹಿತಿ ಪ್ರಕಾರ ಒಬ್ಬ ಪುರುಷನನ್ನು ಸಹ ವಶಕ್ಕೆ ಪಡೆದಿದ್ದಾರೆ. 5 ಲಕ್ಷ ರೂಪಾಯಿಗೆ ಮಗು ಮಾರಾಟ ಮಾಡುವ ಪ್ರಕರಣದಲ್ಲಿ ಬಂಧಿತರು ಭಾಗಿಯಾಗಿದ್ದು, ಕಾರವಾರದ ವೈದ್ಯೆ ಹಾಗೂ ನರ್ಸ ಒಬ್ಬರು ಈ ಹಗರಣದಲ್ಲಿ ಭಾಗಿಯಾಗಿರುವ ಅನುಮಾನಗಳಿವೆ!
ಮುಂಬೈ, ಗುಜರಾತ ಮತ್ತು ಕರ್ನಾಟಕದಲ್ಲಿ ನಡೆಯುವ ಮಕ್ಕಳ ಕಳ್ಳ ಸಾಗಾಣಿಕೆ ತಂಡವನ್ನು ಪೊಲೀಸರು ಭೇದಿಸಿದ್ದು, ಕಾರವಾರದಲ್ಲಿ ದಂಪತಿಗೆ 5 ಲಕ್ಷ ರೂಪಾಯಿಗೆ ಮಗು ಮಾರಾಟ ನಡೆದಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಕಾರವಾರದ ಸ್ತ್ರೀರೋಗ ತಜ್ಞೆ ಮತ್ತು ನರ್ಸ್ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಸ್ತುತ ಸುಲೋಚನಾ ಸುರೇಶ ಕಾಂಬಳೆ (45), ಮೀರಾ ರಾಜಾರಾಂ ಯಾದವ (40), ಯೋಗೇಶ ಭೋರ್ (37), ರೋಶನಿ ಘೋಷ್ (34), ಸಂಧ್ಯಾ ರಜಪೂತ (48), ಮದೀನಾ ಅಲಿಯಾಸ್ ಮುನ್ನಿ ಇಮಾಮ್ ಚೌಹಾಣ (44), ತೈನಾಜ್ ಶಾಹಿನ್ ಚೌಹಾಣ (19), ಬೇಬಿ ಮೊಯಿನುದ್ದೀನ್ ತಾಂಬೋಲಿ (50) ಮತ್ತು ಮಗುವಿನ ತಾಯಿ ಮನೀಶಾ ಸನ್ನಿ ಯಾದವ (32) ಎಂಬಾತರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಬoಧಿತರಲ್ಲಿ ವಿವಾಹ ಆಯೋಜಕರು, ಆರೈಕೆದಾರರು ಮತ್ತು ಆಸ್ಪತ್ರೆ ಸಹಾಯಕರಾಗಿ ಕೆಲಸ ಮಾಡುವವರು ಇದ್ದಾರೆ. `ತನ್ನ ಸೊಸೆ ಮನೀಶಾ ಯಾದವ ತನ್ನ ನಾಲ್ಕು ತಿಂಗಳ ಮಗುವನ್ನು ಮಾರಾಟ ಮಾಡಿದ್ದಾಳೆ’ ಎಂದು ಡಿಸೆಂಬರ್ 11ರಂದು ಅಜ್ಜಿಯೊಬ್ಬರು ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಇಡೀ ಪ್ರಕರಣವನ್ನು ಜಾಲಾಡಿದರು. ವಡೋದರಾದ ಮದೀನಾ ಚವ್ಹಾಣ್ ಮತ್ತು ತೈನಾಜ್ ಚೌಹಾಣ್ ಎಂಬುವರ ಸಹಾಯದಿಂದ ಮಗುವನ್ನು ಕಾರವಾರ ದಂಪತಿಗೆ ಮಾರಾಟ ಮಾಡಿರುವುದಾಗಿ ಮನೀಶಾ ಒಪ್ಪಿಕೊಂಡಿದ್ದಾರೆ. ಮಗು ಮಾರಿದ ತಾಯಿಗೆ 1 ಲಕ್ಷ ರೂ ಸಿಕ್ಕಿದ್ದು, ಉಳಿದ ಹಣ ಮದ್ಯವರ್ತಿಗಳಿಗೆ ಹಂಚಿಕೆಯಾಗಿದೆ.
ಮು0ಬೈ ನಗರ ಡಿಸಿಪಿ ರಾಗಸುಧಾ ಆರ್ ನೇತೃತ್ವದ ವಿಶೇಷ ತನಿಖಾ ತಂಡ ಈ ಪ್ರಕರಣದ ತನಿಖೆ ನಡೆಸಿದೆ. ಬಡವರನ್ನು ಗುರಿಯಾಗಿರಿಸಿಕೊಂಡು ಮಕ್ಕಳ ಮಾರಾಟ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.