ಪರಿಸರಕ್ಕೆ ಹಾನಿ ಆಗುವ ರೀತಿ ಮರಳು ತೆಗೆದು ಅದನ್ನು ಕದ್ದುಮುಚ್ಚಿ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಮಂಗಳವಾರ ಟಿಪ್ಪರ್‌ಸಹಿತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಹೊನ್ನಾವರದಿಂದ ಶಿರಸಿಗೆ ಬರುವ ದಾರಿ ಮದ್ಯೆ ವಿವಿಧ ಇಲಾಖೆಯ ಹಲವು ತಪಾಸಣಾ ಕೇಂದ್ರಗಳಿದ್ದು, ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಈ ದಿನ ಕಣ್ಮುಚ್ಚಿ ಕುಳಿತಿದ್ದರು. ಹೀಗಾಗಿ ಆ ಮಾರ್ಗವಾಗಿ ಅಕ್ರಮ ಮರಳು ಸಾಗಾಟದ ಟಿಪ್ಪರ್ ಬಂದರೂ ಅಲ್ಲಿನ ಅಧಿಕಾರಿ-ಸಿಬ್ಬಂದಿ ಸುಮ್ಮನಿದ್ದರು. ಆ ಎರಡು ಟಿಪ್ಪರ್ ತಮ್ಮ ವ್ಯಾಪ್ತಿಯೊಳಗೆ ಬರುವುದನ್ನು ಕಾಯುತ್ತಿದ್ದ ಶಿರಸಿ ಪಿಎಸ್‌ಐ ನಾಗಪ್ಪ ಅವರು ಒಟ್ಟು 44 ಸಾವಿರ ರೂ ಮೌಲ್ಯದ ಎಂಟು ಬರಾಸ್ ಮರಳನ್ನು ವಶಕ್ಕೆಪಡೆದರು. ಜೊತೆಗೆ ಆ ಟಿಪ್ಪರ್’ನ್ನು ಸಹ ಜಪ್ತು ಮಾಡಿದರು.
ಹೊನ್ನಾವರದ ಶರಾವತಿ ಹಾಗೂ ಉಪನದಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಪರಿಸರ ಹಾನಿಯ ಜೊತೆ ಸ್ಥಳೀಯರ ಮೇಲೆಯೂ ದಬ್ಬಾಳಿಕೆ ನಡೆಯುತ್ತಿದೆ. ಗಣಿ ಇಲಾಖೆಯವರು ಮರಳುಗಾರಿಕೆ ತಡೆಗೆ ಪ್ರಯತ್ನ ನಡೆಸಿದಾಗ ಅವರ ಮೇಲೆಯೂ ಹಲ್ಲೆಯ ಪ್ರಯತ್ನ ನಡೆದಿದೆ. ಮರಳುಗಾರಿಕೆ ವಿರುದ್ಧ ದೂರು ನೀಡಿದವರು ಸಹ ಕೋರ್ಟು-ಕಚೇರಿ ಅಲೆದಾಡುತ್ತಿದ್ದಾರೆ.
ಈ ಎಲ್ಲದರ ನಡುವೆ ಶಿರಸಿ ಪೊಲೀಸರು ಧೈರ್ಯವಾಗಿ ಎರಡು ಮರಳುಗಾರಿಕಾ ವಾಹನ ಹಿಡಿದಿದ್ದಾರೆ. ನಿಲೇಕಣಿ ಭೀಮನಗುಡ್ಡ ಕ್ರಾಸಿನಲ್ಲಿ ಅಕ್ರಮ ಮರಳು ಸಾಗಾಟದಲ್ಲಿ ತೊಡಗಿದ್ದ ಬನವಾಸಿ ರಸ್ತೆಯ ಹಂಚಿನಕೇರಿ ಗೋಪಾಲ ದೇವಾಡಿಗ ಹಾಗೂ ಮಾರಿಗುಡಿ ರಸ್ತೆಯ ದಡ್ಲಬಾವಿ ಹತ್ತಿರದ ಕುಮಾರ ಆಚಾರಿ ಸಿಕ್ಕಿಬಿದ್ದಿದ್ದಾರೆ. ಹೊನ್ನಾವರದ ಗೇರುಸೊಪ್ಪಾದ ಮಾವಿನಹೊಳೆಯಿಂದ ಮರಳನ್ನು ಕದ್ದು ತಂದಿರುವುದಾಗಿ ಆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಈ ಹಿನ್ನಲೆ ಪಿಎಸ್‌ಐ ನಾಗಪ್ಪ ಬಿ ಅವರು ಮರಳು ಕದ್ದ ಕಳ್ಳರ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಜರುಗಿಸಿದ್ದಾರೆ.