ಸ್ನೇಹಿತನ ಅಕ್ಕನ ಮದುವೆಗಾಗಿ ತುಮಕೂರಿನಿಂದ ಕುಂದಾಪುರಕ್ಕೆ ಆಗಮಿಸಿದ್ದ ಯೋಗೇಶ್ (23) ಎಂಬಾತ ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿಹೋಗಿದ್ದು, 7 ದಿನದ ನಂತರ ಕಾರವಾರದಲ್ಲಿ ಆತನ ಶವ ದೊರೆತಿದೆ.
ಜೂ 20ರಂದು ಯೋಗೇಶ್ ಸ್ನೇಹಿತ ವಿನಯ್ ಎಂಬಾತನ ಅಕ್ಕನ ಮದುವೆ ಇತ್ತು. ಇದಕ್ಕಾಗಿ ತುಮಕೂರು ಜಿಲ್ಲೆಯ ತಿಪಟೂರಿನಿಂದ ಯೋಗೇಶ್ ಆಗಮಿಸಿದ್ದ. ಮದುವೆ ಹಿಂದಿನ ದಿನ ಇನ್ನೊಬ್ಬ ಸ್ನೇಹಿತ ಸಂದೀಪ ಜೊತೆ ಬಿಜಾಡಿ ಸಮುದ್ರಕ್ಕೆ ತೆರಳಿದ್ದ. ನೀರಿನ ಅಲೆಗಳ ಜೊತೆ ಆಡವಾಡುತ್ತಿದ್ದ ಈತ ಏಕಾಏಕಿ ಮುಂದೆ ತೆರಳಿದ್ದು, ರಭಸ ಅಲೆಗಳಿಗೆ ಸಿಲುಕಿ ಕಣ್ಮರೆಯಾಗಿದ್ದ. ತಕ್ಷಣ ಸಂದೀಪ ಆತನನ್ನು ರಕ್ಷಿಸಲು ಮುಂದಾದರೂ ಸಾಧ್ಯವಾಗಲಿಲ್ಲ. ಅಪಾಯದ ಅಂಚಿನಲ್ಲಿದ್ದ ಸಂದೀಪನನ್ನು ಸ್ಥಳೀಯರು ರಕ್ಷಿಸಿದ್ದರು. ನಂತರ ಆರು ದಿನಗಳ ಕಾಲ ಹುಡುಕಾಟ ನಡೆಸಿದರೂ ಯೋಗೇಶ್’ನ ಸುಳಿವು ದೊರೆತಿರಲಿಲ್ಲ.
ಮಂಗಳವಾರ ಕಾರವಾರದ ಬೈತಖೋಲ್ ಸಮುದ್ರದಲ್ಲಿ ಶವ ತೇಲುತ್ತಿರುವುದನ್ನು ನೋಡಿದ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಗಮಿಸಿ ಆತನ ದೇಹವನ್ನು ಮೇಲೆತ್ತಿದರು. ಬೀಜಾಡಿಯಲ್ಲಿ ಸಮುದ್ರ ಪಾಲಾದ ಯೋಗೇಶನ ಶವ ಇದು ಎಂದು ಪತ್ತೆ ಮಾಡಿದ ಪೊಲೀಸರು ಕುಟುಂಬದವರಿಗೆ ಶವ ಹಸ್ತಾಂತರಿಸಿದರು.
Discussion about this post