ಕಾರು ಖರೀದಿಸುವುದಾಗಿ ಬ್ಯಾಂಕಿಗೆ ನಕಲಿ ದಾಖಲೆ ನೀಡಿ, ಹಣ ಪಡೆದು ವಂಚಿಸುವವರ ಸಂಖ್ಯೆ ಹೆಚ್ಚಾಗಿದೆ. ಶಿರಸಿ ಕೆಡಿಸಿಸಿ ಬ್ಯಾಂಕಿನಲ್ಲಿ ಇದೀಗ ಇಂಥಹುದೇ ಇನ್ನೊಂದು ಪ್ರಕರಣ ನಡೆದಿದ್ದು, ಬ್ಯಾಂಕಿoಗ್ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ.
2024ರ ಫೆ 19ರಂದು ಕಾರು ಖರೀದಿ ಸಾಲ ಬೇಕು ಎಂದು ಶಿರಸಿ ಮಾರಿಗುಡಿ ಬಝಾರ್’ದಲ್ಲಿರುವ ಕೆಡಿಸಿಸಿ ಬ್ಯಾಂಕಿಗೆ ಆಗಮಿಸಿದ ಬಂದಗಳದ ವಸೀಮ್ ಅಬ್ದುಲ್ ಜಲೀಮ್ ಪಟೇಲ್ ಎಂಬಾತ 20.50 ಲಕ್ಷ ರೂಪಾಯಿಗೆ ಅರ್ಜಿ ಸಲ್ಲಿಸಿದ್ದ. ಇದಕ್ಕೆ ಅಬ್ದುಲ್ ಜಲೀಲ್ ಖಾಸಿಂ ಸಾಬ್ ಹಾಗೂ ಟಿಎಸ್‌ಎಸ್ ರಸ್ತೆಯ ವಿಘ್ನೇಶ್ವರ ಆಚಾರಿ ಎಂಬಾತರು ಜಾಮೀನುದಾರರಾಗಿ ಸಹಿ ಮಾಡಿದ್ದರು.
ಆತ ನೀಡಿದ ದಾಖಲೆಗಳ ಪ್ರಕಾರ ಫೆ 22ರಂದು ಹುಬ್ಬಳ್ಳಿಯ ಆದಿಶಕ್ತಿ ಪ್ರೆ ಲಿ ಕಂಪನಿಗೆ ಬ್ಯಾಂಕಿನವರು 20.50 ಲಕ್ಷ ಹಾಗೂ ಇತರೆ ವೆಚ್ಚಗಳಿಗಾಗಿ 5.54 ಲಕ್ಷ ರೂ ಹಣ ರವಾನಿಸಿದ್ದರು. ಆದರೆ, ವಸೀಮ್ ಅಬ್ದುಲ್ ಜಲೀಮ್ ಪಟೇಲ್ ಕಾರ್ ಖರೀದಿಸದೇ ಬ್ಯಾಂಕಿಗೆ ಎರಡು ತಿಂಗಳು ಬಡ್ಡಿ ತುಂಬಿದ್ದ. ನಂತರ ಬಡ್ಡಿ ತುಂಬುವುದನ್ನು ಸಹ ನಿಲ್ಲಿಸಿದ್ದ. ಏಪ್ರಿಲ್ ತಿಂಗಳಿನಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ ಆತ ನೀಡಿದ ಕಾಗದಪತ್ರಗಳೆಲ್ಲವೂ ನಕಲಿ ಎಂದು ಬ್ಯಾಂಕಿನವರಿಗೆ ಅರಿವಾಗಿದೆ.
ಇದರಿಂದ ಕಂಗಾಲಾದ ಬ್ಯಾಂಕಿನ ಶಾಖಾ ವ್ಯವಸ್ಥಾಪಕಿ ಸೀಮಾ ವಿಠ್ಠಲ ಭಟ್ಟ ಬ್ಯಾಂಕಿಗೆ ಮೋಸ ಮಾಡಿದವರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ತಿಂಗಳ ಹಿಂದೆ ಸಹ ಇಂಥಹುದೇ ಪ್ರಕರಣ ವರದಿಯಾಗಿತ್ತು.
Discussion about this post