ಪ್ರಕೃತಿಯಿಂದ ತಮ್ಮ ಬದುಕಿಗೆ ಬೇಕಾಗುವ ಎಲ್ಲಾ ಸದುಪಯೋಗಗಳನ್ನು ಪಡೆದುಕೊಳ್ಳುವ ಮನುಜ `ಸಾಮ್ರಾಜ್ಯದಲ್ಲಿ ತಾನು ಮಾತ್ರ ಬದುಕುವವನು, ಉಳಿದ ಜೀವಿಗಳೆಲ್ಲವೂ ಲೆಕ್ಕಕ್ಕಿಲ್ಲ’ ಎಂಬoತೆ ವರ್ತಿಸುತ್ತಿರುವುದು ಈ ಇಳೆಯ ನೆಮ್ಮದಿಗೆ ಪೂರಕವಾದುದಲ್ಲ. ನಗರಗಳು ಬೆಳೆಯುತ್ತಾ ಹೋದಂತೆ ಬೇಡಿಕೆಗಳು ಕೂಡಾ ಹೆಚ್ಚಾಗುತ್ತಾ ಪ್ರಕೃತಿಯ ಸೂಕ್ಷ್ಮ ಆಯಾಮಗಳನ್ನು ನಾಶ ಮಾಡುತ್ತಾ ಮಾನವ ಸಾಮ್ರಾಜ್ಯದ ಅಧಿಪತ್ಯ ಬೆಳೆಯುತ್ತಾ ಇದೆ. ಓಣಿ – ಕೇರಿ, ಬಡಾವಣೆ ಎಲ್ಲೆಲ್ಲೂ ಗಗನ ಚುಂಬಿಸುವ ಫ್ಲಾಟ್’ಗಳು, ಮನೆಗಳು, ಕಟ್ಟಡಗಳು ಸೇರಿ ಎಲ್ಲಿ ನೋಡಿದರೂ ಕಾಂಕ್ರೀಟ್ ಕಾಡು ಹೆಚ್ಚಾಗಿದೆ. ಇದರಿಂದ ನೈಜ, ಪ್ರಕೃತಿ ಸಹಜ ಕಾಡುಗಳು ಬರಿದಾಗುತ್ತಿದೆ. ಎಲ್ಲಾದರೂ ಒಂದು ಸ್ವಲ್ಪ ಮರಗಳಿರುವ ಜಾಗವಿದ್ದರೆ ಅಲ್ಲಿ ವಾಣಿಜ್ಯ ಸಂಕೀರ್ಣ, ಮನೆ, ಸೈಟು, ಫ್ಲಾಟ್ ಎಂದು ಆ ಮರಗಳನ್ನು ಕಡಿದು ಮಾನವ ತನ್ನ ನೆಲೆಯನ್ನು ಭದ್ರಗೊಳಿಸುವ ಹೊತ್ತಿಗೆ ಆ ಮರದಲ್ಲಿ ಎಷ್ಟು ಹಕ್ಕಿಗಳು ಗೂಡು ಕಟ್ಟಿ ಅದರಲ್ಲಿ ಎಷ್ಟು ಮರಿ ಹಕ್ಕಿಗಳು, ಮೊಟ್ಟೆಗಳು ಇದ್ದಿರಬಹುದು ಎಂದು ಯಾರಾದರೂ ಯಾವತ್ತಿಗಾದರೂ ಯೋಚಿಸಿದ್ದು ಉಂಟಾ? ಈ ಮರಗಳನ್ನು ಕಡಿದಾಗ ಅದೇ ಮರದ ಗೂಡಿನಲ್ಲಿ ಮರಿಗಳ ಜೊತೆ ಇದ್ದು ತಾಯಿ ಹಕ್ಕಿ ಮರಿ ಹಕ್ಕಿಗಳಿಗೆ ಆಹಾರ ತರಲೆಂದು ಹೋಗಿ ಹಿಂತಿರುಗಿ ಬರುವಾಗ ಆ ಸ್ಥಳದಲ್ಲಿ ಇದ್ದ ಮರ ಧರೆಗುರುಳಿದರೆ ಏನಾಗಬೇಕು? ಮರಿ ಹಕ್ಕಿಗಳು ನೆಲದಲ್ಲಿ ಛಿದ್ರವಾಗಿ ಸತ್ತು ಬಿದ್ದಿರುವಾಗ ಆ ತಾಯಿ ಹಕ್ಕಿಯ ವೇದನೆ, ರೋದನವನ್ನು ಮರ ಕಟುಕರು ಎಂದಾದರೂ ಗಮನಿಸಿದ್ದೀರಾ? ಆ ಮರಿ ಹಕ್ಕಿಗಳನ್ನು ಕೊಂದಿರುವ ಮತ್ತು ತಾಯಿ ಹಕ್ಕಿಯ ವೇದನೆಯು ಕಡಿದವರಿಗೆ ಶಾಪ ತಟ್ಟದೇ ಇದ್ದೀತೆ?
ಹಕ್ಕಿಗಳು ಈ ಇಳೆಯಲ್ಲಿ ನಮ್ಮೊಂದಿಗೆ ಬದುಕುವ ಕಾರಣ ಹಕ್ಕಿಗಳ ಬದುಕಿನಿಂದ ನಮ್ಮ ಬದುಕಿಗೆ ಕೂಡಾ ಧನಾತ್ಮಕ ಅಂಶಗಳು ಸೇರಿಕೊಂಡಿರುತ್ತವೆ. ಹಕ್ಕಿಗಳು ಆ ಮರ, ಈ ಮರ ಅಂತ ಹೇಳಿ ಬಹುತೇಕ ಮರಗಳ ಹಣ್ಣು ಗಳನ್ನು ತಿನ್ನುತ್ತಾ ಹಣ್ಣುಗಳ ಬೀಜಗಳನ್ನು ಹಿಕ್ಕೆ ಹಾಕುತ್ತಾ, ಅಥವಾ ಕೊಕ್ಕಿನಲ್ಲಿ ಒಂದಷ್ಟು ಹಣ್ಣುಗಳನ್ನು ಕೊಂಡೊಯುವಾಗ ಕೆಲವು ಬೀಜಗಳು ಅಲ್ಲಲ್ಲಿ ಬಿದ್ದು ಬೀಜ ಪಸರಣೆ ಆಗಿ ಗಿಡ ಮರಗಳು ಬೆಳೆದು ಈ ಇಳೆಯ ಹಸಿರು ಹೊದಿಕೆ ಬೆಳೆಯಲು ಮತ್ತು ಅದರ ಮೂಲಕ ಅಂತರ್ಜಲ ವೃದ್ಧಿಯಾಗುವಂತೆ ಕೂಡಾ ಹಕ್ಕಿಗಳ ಬದುಕು ಪಾತ್ರ ವಹಿಸುತ್ತವೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಮಾನವ ಮರಗಳನ್ನು ಕಡಿಯುತ್ತಾ ತನ್ನ ಬದುಕನ್ನು ಮಾತ್ರ ಅರ್ಥ ಮಾಡಿಕೊಳ್ಳುತ್ತಿದ್ದಾನೆ.
ಈಗ ಮರ, ಗಿಡಗಳ ಸಂಖ್ಯೆ ಕಡಿಮೆಯಾಗುತ್ತಾ ಇರುವ ಕಾರಣ ಹಕ್ಕಿಗಳು ಮನೆಗಳ ಗೋಡೆ, ವಿದ್ಯುತ್ ಕಂಬ, ಮೇಲ್ ಚಾವಣಿ, ಕಿಟಕಿ ಸಂದು.. ಮಹೀಗೇ ಎಲ್ಲೆಲ್ಲೋ ಗೂಡು ಕಟ್ಟಿರುತ್ತವೆ. ಆದರೆ ಇಂತಹ ಗೂಡುಗಳಲ್ಲಿ ಅವುಗಳಿಗೆ ನೆಮ್ಮದಿ ಇಲ್ಲದೇ ಮೊಟ್ಟೆಗಳಿಗೆ, ಮರಿಗಳಿಗೆ ಭದ್ರತೆ ಇಲ್ಲದೇ ಒದ್ದಾಡುತ್ತಿವೆ. ಮನೆಯ ನಾಯಿ, ಬೆಕ್ಕುಗಳ ಭಯದಿಂದ, ಮನೆಯಲ್ಲಿ ಸದಾ ಮನುಜ ಸಂಚಾರ ಇರುವುದರಿಂದ ಆತಂಕದಲ್ಲೇ ಗೂಡಿನಲ್ಲಿರುತ್ತವೆ. ಮರಿಗಳಿಗೆ ಸರಿಯಾದ ಆಹಾರವೂ ಸಿಗದೇ ತಾಯಿ ಹಕ್ಕಿಗೂ ಸರಿಯಾದ ಭದ್ರತೆ ಇಲ್ಲದೇ ಹಕ್ಕಿಗಳ ಗೋಳು ಕೇಳುವವರಿಲ್ಲದ ಸಂಕಟವಾಗುತ್ತಿವೆ.
ಪ್ಲಾಸ್ಟಿಕ್ ಗೂಡು ಕಟ್ಟಿದ ಹಕ್ಕಿ!
ಈ ಚಿತ್ರದಲ್ಲಿ ಗಮನಿಸಿ, ಹಕ್ಕಿಯೊಂದು ಮರದ ಮೇಲೆ ಪ್ಲಾಸ್ಟಿಕ್ ತುಂಡುಗಳನ್ನು ಸೇರಿಸಿ ಗೂಡು ಕಟ್ಟಿಕೊಂಡಿದೆ. ಅಂದರೆ ಹಕ್ಕಿಗಳಿಗೆ ಗೂಡು ಕಟ್ಟಲು ಬೇಕಾಗುವಂತಹ ಕಡ್ದಿ, ಹುಲ್ಲು, ಬೇರು, ಎಸಳು, ಒಣ ಎಲೆ ಕೂಡಾ ಸಿಗದೇ ಇರುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರೆ ಇದು ನಿಜಕ್ಕೂ ತೀರಾ ದುರಂತ. ಹಕ್ಕಿಗಳ ಸಂಖ್ಯೆ ಕಡಿಮೆಯಾದಷ್ಟೂ ಅದು ಈ ಭುವಿಯ ಭದ್ರತೆಗೆ ಸಮಸ್ಯೆಯಾಗಬಹುದು. ಕೇವಲ ತಮ್ಮ ಮನೆ, ಸಂಸಾರ, ಬದುಕಿನ ಬಗ್ಗೆ ಮಾತ್ರ ಚಿಂತಿಸುವ ಮಾನವ ಸ್ವಲ್ಪವಾದರೂ ನಮ್ಮ ಜೊತೆ ಬದುಕುವ ಇತರ ಜೀವಿಗಳ ಬಗ್ಗೆನೂ ಚಿಂತಿಸಿ ಅವುಗಳಿಗೆ ಪೂರಕವಾಗಿ ನಮ್ಮ ಬದುಕನ್ನು ತೊಡಗಿಸಿಕೊಳ್ಳಲು ಕಲಿತರೆ ಈ ಭೂವಿಯಲ್ಲಿ ಹುಟ್ಟಿದುದಕ್ಕೆ ಸಾರ್ಥಕವಾಗಬಹುದು.

Discussion about this post