ಭಾರತೀಯ ಸಂಪ್ರದಾಯದಲ್ಲಿ ಪ್ರತಿಯೊಂದು ಪ್ರಾಣಿ, ಗಿಡ-ಮರಗಳಲ್ಲಿಯೂ ದೇವರನ್ನು ನೋಡಲಾಗುತ್ತದೆ. ಅದರಂತೆ ನಾಗಲಿಂಗ ಪುಷ್ಪ ಎಂಬ ಮರ ನಾಡಿನ ಎಲ್ಲಾ ಕಡೆ ಪೂಜನೀಯ ಸ್ಥಾನ ಪಡೆದಿದೆ. ದಕ್ಷಿಣ ಅಮೇರಿಕಾ ಮೂಲದ ಈ ಗಿಡ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಸಹ ಕಂಡು ಬರುತ್ತದೆ. ನಾಗಲಿಂಗ ಮರದ ಹೂವಿನಲ್ಲಿ ಹೆಸರೇ ಹೇಳುವಂತೆ ನಾಗರ ಹಾಗೂ ಲಿಂಗದ ರಚನೆ ಇರುತ್ತದೆ. ನಾಗ ಸಂಪಿಗೆ ಎಂಬುದು ಈ ಮರದ ಇನ್ನೊಂದು ಹೆಸರು.
ಈ ಹೂವುಗಳಿಗೆ ಆಕರ್ಷಕ ಸುಗಂಧವಿದೆ. ಇದರ ಪರಿಮಳಕ್ಕೆ ಹಾವುಗಳು ಹತ್ತಿರ ಬರುತ್ತವೆ ಎಂದು ನಂಬಲಾಗಿದೆ. ಆದರೆ, ಮರಕ್ಕೆ ಹಣ್ಣಾದಾಗ ಸುವಾಸನೆ ಹೋಗಿ ದುರ್ವಾಸನೆ ಬರುತ್ತದೆ. ಹಣ್ಣು ಬಿದ್ದ ನಂತರ ಅದನ್ನು ಪ್ರಾಣಿಗಳು ತಿನ್ನುತ್ತವೆ. ಪ್ರಾಣಿಗಳ ದೇಹದಿಂದ ಬೀಜ ಹೊರ ಹೋದಾಗ ಗಿಡ ಹುಟ್ಟಿ ಬೆಳೆಯುತ್ತದೆ. ಮರದ ಬುಡದಲ್ಲಿ ಬಿದ್ದ ಬೀಜ ಗಿಡವಾಗುವುದು ಅಪರೂಪ.
ಶೀತ ಹಾಗೂ ಹೊಟ್ಟೆನೋವಿಗೆ ಈ ಹೂವಿನಲ್ಲಿ ಔಷಧಿಯಿದೆ. ಎಲೆಗಳ ರಸವನ್ನು ಚರ್ಮರೋಗಕ್ಕೆ ಬಳಸುತ್ತಾರೆ. ಮಲೇರಿಯಾ ರೋಗಕ್ಕೆ ಸಹ ಇದು ಔಷಧಿಯಾಗಿದೆ. ನಾಗಲಿಂಗ ಪುಷ್ಪಗಳಲ್ಲಿ ಮಕರಂದವಿಲ್ಲದಿದ್ದರೂ, ಅದರ ಬಣ್ಣ ಮತ್ತು ಸುವಾಸನೆ ಅರೆಸಿ ಜೇನು ನೊಣಗಳು ಹೋಗುತ್ತವೆ. ಅಲ್ಲಿಂದ ಪರಾಗವನ್ನು ಸಂಗ್ರಹಿಸುತ್ತವೆ. ಸಾಮಾನ್ಯವಾಗಿ ಇತರ ಮರಗಳಲ್ಲಿ ರೆಂಬೆ, ಕೊಂಬೆಗಳ ತುದಿಯಲ್ಲಿ ಹೂ ಬಿಟ್ಟರೆ, ಇದಕ್ಕೆ ಕಾಂಡದಲ್ಲಿಯೇ ಹೂ ಅರಳುತ್ತದೆ. ಒಟ್ಟಿನಲ್ಲಿ ಇದೊಂದು ಅಪರೂಪದ ಮತ್ತು ಆಕರ್ಷಕ ಮರ ಎಂಬುದರಲ್ಲಿ ಎರಡು ಮಾತಿಲ್ಲ.
- ಜಯಲಕ್ಷ್ಮಿ ಭಟ್, ಪುತ್ತೂರು
Discussion about this post