ಇಂದು ಮಳೆ ಬರುತ್ತದಾ? ಸೆಖೆ ಜಾಸ್ತಿಯಾ? ಅಥವಾ ಚಳಿಯ ವಾತಾವರಣ ಹೇಗಿರಬಹುದು? ಇದೆಲ್ಲ ಮಾಹಿತಿ ಹವಾಮಾನ ಇಲಾಖೆಗಿಂತಲೂ ಕರಾರುವಕ್ಕಾಗಿ ಮೂಕಜೀವಿಗಳಿಗೆ ಸಿಗುತ್ತದೆ!
ಬೆಳಗ್ಗೆ ತಿಂಡಿ ತಿಂದ ನಂತರ ತೋಟಕ್ಕೆ ಹೋಗುವುದು ರೂಢಿ. ಕಾಲಿಗೆ ಬೂಟು ಧರಿಸಿ ಹೋಗೋಣ ಎಂದು ಹತ್ತಿರ ಹೋದರೆ ಈ ಮಳ್ಳಿರುವೆಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ವಿಪರೀತ ಗಡಿಬಿಡಿಯಿಂದ ಓಡುತ್ತಿದ್ದವು. ಹೆಚ್ಚಿನ ಕೆಲಸಗಾರ ಇರುವೆಗಳು ಮೊಟ್ಟೆಗಳನ್ನು ಕಚ್ಚಿಕೊಂಡು ಸುರಕ್ಷಿತ ಸ್ಥಾನದತ್ತ ಹೋಗುತ್ತಿದ್ದವು. ಬೆಳಗ್ಗೆ ಅಷ್ಟು ಹೊತ್ತಿಗೆ ಅವುಗಳಿಗೆ ಯಾವ ತರಹದ ಅಪಾಯ ಬಂದು, ತಮ್ಮ ಮೂಲ ಗೂಡು ಬಿಟ್ಟು ಹೊರಟವು ಎಂದು ತಿಳಿಯಲಿಲ್ಲ.
ಈ ಇರುವೆಗಳ ವೈಜ್ಞಾನಿಕ ಹೆಸರು ಗೊತ್ತಿಲ್ಲ. ನಮ್ಮಲ್ಲಿ ಮಳ್ಳೆರುವೆ, ಕಚಗುಳಿ ಇರುವೆ ಎಂದು ಕರಿತೇವೆ. ಇವು ಕಚ್ಚುವುದಿಲ್ಲ ಎಂಬ ಸಮಾಧಾನ ಅಷ್ಟೇ. ಆದರೆ, ಬಾರಿ ಸಂಖ್ಯೆಯಲ್ಲಿರುವ ಇವು ಮೈಗೆ, ತಲೆಗೆ ಹತ್ತಿದರೆ ಕಿರಿಕಿರಿಯಂತೂ ಹೌದು. ಕಳೆದ ಒಂದು ತಿಂಗಳಿAದ ವಿಶ್ರಾಂತಿಯಲ್ಲಿ ಇರುವುದರಿಂದ ಶೂ ಉಪಯೋಗಿಸುವ ಪ್ರಮೆಯ ಬಂದಿರಲಿಲ್ಲ. ಚಿಕ್ಕದಾದ ಕಪ್ಪೆಯೊಂದು ಖಾಯಂ ಆಗಿ ಬೂಟಿನೊಳಗೆ ಬಚ್ಚಿಟ್ಟು ಕುಳಿತಿತ್ತು. ಈ ಮಳ್ಳಿರುವೆಗಳ ಸೈನ್ಯ ಆ ಬೂಟನ್ನೂ ಬಿಡಲಿಲ್ಲ. ಕಚ್ಚುವ ಚಾಳಿ ಈ ಇರುವೆಗಳಿಗೆ ಇಲ್ಲದಿದ್ದರೂ, ಕ್ರಿಮಿ ಕೀಟ, ಕಪ್ಪೆಗಳ ಮೇಲೆ ಬಹಳ ಆಕ್ರಮಣಕಾರಿಯಾಗಿ ಎರಗುತ್ತವೆ. ಇರುವೆ ದಾಳಿಗೆ ಸಿಕ್ಕ ಕಪ್ಪೆ ಸತ್ತೇ ಹೋಗುವ ಹಂತದವರೆಗೂ ಹೋಗಿತ್ತು. ಅಂತೂ ಕಷ್ಟಪಟ್ಟು ಐದಡಿ ದೂರಕ್ಕೆ ಒಂದೇಟಿಗೆ ಜಿಗಿದು ಬಚವಾಯಿತು. ವಾತಾರವಣದಲ್ಲಿ ಸಣ್ಣ ವ್ಯತ್ಯಾಸವಾದರೂ ಚಲನ-ವಲನದಲ್ಲಿ ಬದಲಾವಣೆಯಾಗುವ ಈ ಇರುವ ಇದೀಗ ನೀಡಿದ ಈ ಶಕುನ ಏನು ಎಂದು ಕಾದು ನೋಡಬೇಕು.
ಅಖಿಲೇಶ ಚಿಪ್ಲಿ, ಸಾಗರ
Discussion about this post