ಪ್ರತಿ ಶನಿವಾರ ಬೀದಿ ಬೀದಿ ಗುಡಿಸಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುತ್ತಿರುವ ಪಹರೆ ವೇದಿಕೆಯ `ಸ್ವಚ್ಛತಾ ಆಂದೋಲನ’ ಇದೀಗ 500ನೇ ವಾರ ಪೂರೈಸಿದೆ. ಈ ಹಿನ್ನಲೆ ಸಂಭ್ರಮಾಚರಣೆ ನಡೆಸಲು ಉದ್ದೇಶಿಸಿದ್ದ ಪಹರೆ ವೇದಿಕೆ ಸಡಗರಕ್ಕೆ ವೆಚ್ಚವಾಗುವ ಹಣವನ್ನು ಪೂರ್ತಿಯಾಗಿ ಶಿರೂರು (Shiruru ) ಗುಡ್ಡ ಕುಸಿತದಿಂದ ಸಂತ್ರಸ್ತರಾದವರಿಗೆ ವಿತರಿಸಿದೆ. ನೊಂದವರನ್ನು ಇನ್ನಷ್ಟು ಸತಾಯಿಸುವುದು ಬೇಡ ಎಂಬ ದೃಷ್ಟಿಯಿಂದ ಪಹರೆ ವೇದಿಕೆಯ ಸದಸ್ಯರು ಸಂತ್ರಸ್ತರ ಫೋಟೋವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊoಡಿಲ್ಲ!
ನ್ಯಾಯವಾದಿ ನಾಗರಾಜ ನಾಯಕ ಪಹರೆ ವೇದಿಕೆಯ ರೂವಾರಿ. ಪಹರೆ ವೇದಿಕೆಯ ಸದಸ್ಯರು ಕಾರವಾರದಲ್ಲಿ ಸ್ವಚ್ಛತೆ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರತಿ ಶನಿವಾರ ಬೆಳಗ್ಗೆ ಬೀದಿ ಬೀದಿಯಲ್ಲಿ ಕಸ ಗುಡಿಸುತ್ತಾರೆ. ಎಲ್ಲೆಂದರಲ್ಲಿ ಬಿದ್ದ ತ್ಯಾಜ್ಯಗಳನ್ನು ಆರಿಸುತ್ತಾರೆ. ಜೊತೆಗೆ ಹಸಿರು ಕಾರವಾರಕ್ಕಾಗಿ ಗಿಡ-ಮರಗಳ ಆರೈಕೆ ಮಾಡುತ್ತಿದ್ದಾರೆ. ಈ ಎಲ್ಲಾ ಕೆಲಸಗಳಿಗೆ 500 ವಾರ ಪೂರೈಸಿದ ಹಿನ್ನಲೆ ಸಂಭ್ರಮೋತ್ಸವದ ತಯಾರಿಯಲ್ಲಿರುವಾಗ ಗುಡ್ಡ ಕುಸಿತದ ಸುದ್ದಿ ಬಂದಿದ್ದು, ಸಂಭ್ರಮೋತ್ಸವವನ್ನು `ಸೇವಾ ದಿನ’ ಎಂದು ಅವರು ಘೋಷಿಸಿದರು.
ಪಹರೆ ಸದಸ್ಯರೆಲ್ಲರೂ ಉಳುವರೆಗೆ ಹೋಗಿ ಅಲ್ಲಿನ ಸಂತ್ರಸ್ತರಿಗೆ ನೆರವು ನೀಡಿದರು. ಕಿನ್ನರದಲ್ಲಿ ಮನೆಹಾನಿಯಿಂದ ಸಾವನಪ್ಪಿದ ಕುಟುಂಬಕ್ಕೂ ಸಾಂತ್ವಾನ ಹೇಳಿದರು. ಅಗತ್ಯವಿರುವ ದಿನ ಬಳಕೆಯ ವಸ್ತುಗಳನ್ನು ಅವರು ನೊಂದವರಿಗೆ ಹಸ್ತಾಂತರಿಸಿದರು. ಗುಡ್ಡ ಕುಸಿತ ಸ್ಥಳಗಳಿಗೆ ಭೇಟಿ ನೀಡಿದ ಪಹರೆ ವೇದಿಕೆಯ ಸದಸ್ಯರ ಫೋಟೋಗಳನ್ನು ಮಾತ್ರ ಕ್ಲಿಕ್ಕಿಸಿಕೊಂಡ ಅವರು ನೆರವು ಪಡೆದವರ ಫೋಟೋಗಳನ್ನು ಮರೆ ಮಾಚಿದ್ದಾರೆ.




Discussion about this post