ಶೈಕ್ಷಣಿಕ ವೃತ್ತಿಯ ಜೊತೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ಶಿಕ್ಷಕ ಸಂತೋಷ ಹೊನ್ನಪ್ಪ ಕೊಳಗೇರಿ ತಮ್ಮ ಶೈಕ್ಷಣಿಕ ವೃತ್ತಿಗೆ ಅಗಸ್ಟ 31ರಂದು ಅಧಿಕೃತವಾಗಿ ನಿವೃತ್ತರಾಗಲಿದ್ದಾರೆ. ಆದರೆ, ಅವರ ಸೇವಾ ಚಟುವಟಿಕೆಗಳಿಗೆ ನಿವೃತ್ತಿ ಇಲ್ಲ!
ಕುಮಟಾದ ಹನೇಹಳ್ಳಿಯಲ್ಲಿ ಹುಟ್ಟಿದ ಅವರು ಜೊಯಿಡಾ ಸೇರಿ ಹಲವು ಕಡೆ ಮಕ್ಕಳಿಗೆ ಪಾಠ ಮಾಡಿದ್ದಾರೆ. 40 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅವರು ಕಳೆದ 33 ವರ್ಷಗಳಿಂದ ಯಲ್ಲಾಪುರ ತಾಲೂಕಿನ ವಿವಿಧ ಶಾಲೆಗಳಿಗೆ ಕೊಡುಗೆ ನೀಡಿದ್ದಾರೆ. ವಜ್ರಳ್ಳಿ, ಚಿನ್ನಾಪುರ, ಮಲವಳ್ಳಿ ಶಾಲೆಯ ಮಕ್ಕಳಿಗೆ ಸಂತೋಷ ಕೊಳಗೇರಿ ಎಂದರೆ ಅಚ್ಚುಮೆಚ್ಚು. ಶಿಕ್ಷಕ ಸಂತೋಷ ಅವರ ಬಳಿ ಕಲಿತ ಅನೇಕರು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದು, ಈಗಲೂ ಅವರ ಪಾಠದ ಬಗ್ಗೆ ನೆನೆಯುತ್ತಾರೆ.
ಅಪಾರವಾದ ಜ್ಞಾನ ಸಂತೋಷ ಅವರ ಬಂಡವಾಳ. ಅಧ್ಯಯನ ಇಲ್ಲದೇ ಸಂತೋಷ ಅವರು ಎಂದಿಗೂ ತರಗತಿಗೆ ಪ್ರವೇಶಿಸಿದವರಲ್ಲ. ಮುಖ್ಯ ಅಧ್ಯಾಪಕ ಹುದ್ದೆಯಲ್ಲಿ ಸಹ ಅವರದ್ದು ಅಷ್ಟೇ ಅಚ್ಚುಕಟ್ಟಾದ ಜೀವನ. ಶಾಲಾ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ ಅವರು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಆಗಿದ್ದರು. ಸಾಕ್ಷರತಾ ಸಮನ್ವಯಾಧಿಕಾರಿಯಾಗಿದ್ದಾಗ ಶಾಲೆ ಬಿಟ್ಟ ಮಕ್ಕಳನ್ನು ಹುಡುಕಿ ಶಾಲೆಗೆ ಸೇರಿಸಿದ್ದರು. ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿದ್ದಾಗ ನೌಕರರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ದುಡಿದಿದ್ದರು.
ಕ್ರೀಡಾ ಚಟುವಟಿಕೆಗಳಲ್ಲಿ ಸಹ ಮುಂಚೂಣಿಯಲ್ಲಿರುವ ಸಂತೋಷ ಅವರಿಗೆ ಕ್ರಿಕೆಟ್ ಎಂದರೆ ಪ್ರಾಣ. ನಾಟಕ ಪಾತ್ರಗಳಲ್ಲಿಯೂ ಅವರು ಜನ ಮೆಚ್ಚುಗೆಯ ಕಲಾವಿದರು. ಸಂತೋಷ ಕೊಳಗೇರಿ ಅವರು ಪ್ರಶಸ್ತಿಗಳಿಗೆ ಅರ್ಜಿ ಹಾಕಿದವರಲ್ಲ. ಆದರೂ ತಾಲೂಕು ಉತ್ತಮ ಶಿಕ್ಷಕ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿ ಹಲವು ಸನ್ಮಾನಗಳು ಅವರಿಗೆ ಸಂದಿವೆ. ಅವರ ಪತ್ನಿ ಸುಚೇತಾ ಮಿರಾಶಿ ಸಹ ಉತ್ತಮ ಶಿಕ್ಷಕಿ.
ಪ್ರಸ್ತುತ ಸರ್ಕಾರಿ ಸೇವೆಗೆ ವಿದಾಯ ಹೇಳುತ್ತಿರುವ ಸಂತೋಷ ಕೋಳಗೇರಿ ಅವರಿಗೆ ಮಲವಳ್ಳಿ ಶಾಲೆ ಹಾಗೂ ಅಲ್ಲಿನ ರಾಮಲಿಂಗ ದೇವಸ್ಥಾನ ಯುವಕ ಮಂಡಳ ಉತ್ಸವ ಸಮಿತಿಯವರು ಸನ್ಮಾನಿಸಿ, ಬೀಳ್ಕೊಡಲಿದ್ದಾರೆ.