ಕಲೆಯಲ್ಲಿ ಆಸಕ್ತಿ-ಪರಂಪರೆಯ ಹಿನ್ನೆಲೆಯಿದ್ದು, ಮೇಳದ ತಿರುಗಾಟಕ್ಕೆ ಅಗತ್ಯವಿರುವಷ್ಟು ಅಭ್ಯಾಸ ಮಾಡಿಯೂ ಸ್ಥಳೀಯವಾಗಿಯೇ ಕಲಾ ಸೇವೆ ಮಾಡಿಕೊಂಡು ಮಾದರಿಯಾದವರು ತೇಲಂಗಾರ ಸಮೀಪದ ಮಾನಿಮೂಲೆಯ ವಿಶ್ವೇಶ್ವರ ಗಾಂವ್ಕರ.
ವಜ್ರಳ್ಳಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯವರೆಗೆ ಓದಿದ ಅವರು ತಂದೆ ತಮ್ಮಯ್ಯ ಗಾಂವ್ಕರ ಯಕ್ಷಗಾನದ ಭಾಗವತರಾಗಿ ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ದೊಡ್ಡಪ್ಪ ರಾಮಕೃಷ್ಣ ಗಾಂವ್ಕರ ಅರ್ಥಧಾರಿಯಾಗಿ ಪ್ರಸಿದ್ಧರಾಗಿದ್ದರು. ಇದರಿಂದ ಸಹಜವಾಗಿ ಯಕ್ಷಗಾನದತ್ತ ಆಸಕ್ತಿ ಬೆಳೆಯಿತು. ಮನೆತನದ ಕಲಾ ಸೇವೆಯ ಪರಂಪರೆಯನ್ನು ಮುಂದುವರಿಸಿಕೊAಡು ಹೋಗಬೇಕೆಂಬ ಉದ್ದೇಶ ಅವರದ್ದಾಗಿತ್ತು.
ಮಾಧವ ಗಾಂವ್ಕರ ಕಂಚಿಮನೆ, ವಿಶ್ವನಾಥ ಹೆಗಡೆ ಕಲ್ಮನೆ ಅವರಲ್ಲಿ ಮದ್ದಲೆವಾದನ ಅಭ್ಯಾಸ ಮಾಡಿದರು. 20ನೇ ವಯಸ್ಸಿನಲ್ಲಿ ತಂದೆ ಹಾಗೂ ದೊಡ್ಡಪ್ಪನೊಂದಿಗೆ ಸ್ಥಳೀಯ ಯಕ್ಷಗಾನ, ತಾಳಮದ್ದಲೆಗಳಲ್ಲಿ ಮದ್ದಲೆ ವಾದಕರಾಗಿ ಭಾಗವಹಿಸಲು ಆರಂಭಿಸಿದರು. ತೇಲಂಗಾರ, ವಜ್ರಳ್ಳಿ ಭಾಗದ ನಾಟಕಗಳಲ್ಲಿ ಮಹಿಳಾ ಪಾತ್ರಗಳನ್ನೂ ನಿರ್ವಹಿಸುತ್ತಿದ್ದರು.
ಧೋರಣಗಿರಿ, ಶಿರಸಿ, ಕಾರವಾರ, ಅಂಕೋಲಾ, ಗುಂದ ಮೊದಲಾದ ಊರುಗಳಲ್ಲಿ ಅವರು ಆಟ-ಕೂಟಗಳಲ್ಲಿ ಭಾಗವಹಿಸಿದ್ದಾರೆ. `ರಾತ್ರಿಯಿಂದ ಬೆಳಗಿನವರೆಗೆ ಮದ್ದಲೆವಾದನ ಮಾಡಿದರೆ ಮೂರುವರೆಯಿಂದ ನಾಲ್ಕು ರೂ ಸಂಬಳ ಸಿಗುತ್ತಿತ್ತು. ಬಸ್, ಲಾರಿಯನ್ನು ಹತ್ತಿ ಅಥವಾ ನಡೆದುಕೊಂಡು ಕಾರ್ಯಕ್ರಮದ ಸ್ಥಳಕ್ಕೆ ತಲುಪಬೇಕಿತ್ತು. ಆದರೂ ಕಲೆಯ ಮೇಲಿನ ಆಸಕ್ತಿ, ಪ್ರೀತಿಯ ಮುಂದೆ ಆಯಾಸ, ಪ್ರಯಾಸಗಳೆಲ್ಲ ನಗಣ್ಯವಾಗಿತ್ತು’ ಎಂದು ಆ ದಿನಗಳನ್ನು ಅವರು ನೆನಪಿಸಿಕೊಂಡರು.
ಗಾoವ್ಕರ ಅವರ ಮದ್ದಲೆವಾದನದ ಪ್ರತಿಭೆಯನ್ನು ಕಂಡು ಅನೇಕ ಹಿತೈಷಿಗಳು, ಹಿರಿಯರು ಮೇಳಕ್ಕೆ ಹೋಗುವಂತೆ ಒತ್ತಾಯಿಸಿದ್ದರು. ಆದರೆ ಆರೋಗ್ಯದ ಸಮಸ್ಯೆ, ಮೇಳದ ತಿರುಗಾಟದ ಬವಣೆ ಬೇಡ ಎಂದು ಅಲ್ಲಿಂದ ದೂರ ಉಳಿದರು. ಆಗಿನ ಕಾಲದ ಪ್ರಸಿದ್ಧ ಕಲಾವಿದರಾದ ರಾಮಚಂದ್ರ ಭಾಗ್ವತ ಕವಾಳೆ, ಮಹಾಬಲೇಶ್ವರ ಭಾಗ್ವತ, ಹರಿಮನೆ ಕೃಷ್ಣ ಭಾಗವತರು, ಬಾಳಂತಪಾಲ ನಾರಾಯಣ ಗಾಂವ್ಕರ, ಈಶ್ವರ ಗಾಂವ್ಕರ, ತಿಮ್ಮಣ್ಣ ಗಾಂವ್ಕರ ನೆಲೆಪಾಲ, ಗಣಪತಿ ಭಾಗ್ವತ ಕಳಚೆ ಮುಂತಾದ ಕಲಾವಿದರು ಕಲೆಯಲ್ಲಿ ತೊಡಗಿಸಿಕೊಳ್ಳಲು ಮಾರ್ಗದರ್ಶನ ನೀಡಿದ್ದನ್ನು ಈಗಲೂ ಪ್ರೀತಿಯಿಂದ ಅವರು ನೆನೆಯುತ್ತಾರೆ.
15 ವರ್ಷಗಳ ಕಾಲ ಕಲಾ ಸೇವೆ ನಡೆಸಿದ ವಿಶ್ವೇಶ್ವರ ಗಾಂವ್ಕರ ನಂತರ ಕೌಟುಂಬಿಕ ಜವಾಬ್ದಾರಿ ಹಾಗೂ ಆರೋಗ್ಯದ ಸಮಸ್ಯೆಯಿಂದ ಕಲೆಯಿಂದ ದೂರ ಸರಿಯುವಂತಾಯಿತು. ವಿಶ್ವೇಶ್ವರ ಗಾಂವ್ಕರ ಅವರು ಕಲಾ ಸೇವೆಯಿಂದ ದೂರ ಸರಿದು 34 ವರ್ಷಗಳೇ ಕಳೆದಿವೆ. ಇಂದಿಗೂ ಕಲೆ, ಕಲಾವಿದರ ಮೇಲೆ ಅಪಾರ ಅಭಿಮಾನ, ಆಸಕ್ತಿ ಹೊಂದಿದ್ದಾರೆ. ಸುತ್ತಮುತ್ತ ನಡೆಯುವ ಯಕ್ಷಗಾನ, ತಾಳಮದ್ದಲೆಗಳನ್ನು ನೋಡಿ, ಕಲಾವಿದರನ್ನು ಪ್ರೋತ್ಸಾಹಿಸುತ್ತಾರೆ.
– ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ