ಶಿರೂರು ಗುಡ್ಡ ಕುಸಿತದಿಂದ ನದಿ ಪಾಲಾದ ಆಕ್ಟಿವಾ ಸ್ಕೂಟರ್ ಬಗ್ಗೆ ಭಾನುವಾರದವರೆಗೂ ಯಾರಿಗೂ ಮಾಹಿತಿ ಇರಲಿಲ್ಲ. ಭಾನುವಾರ ಸ್ಕೂಟರ್ ಪತ್ತೆಯಾದ ಬೆನ್ನಲ್ಲಿ ನದಿ ಆಳದಲ್ಲಿ ಇನ್ನಷ್ಟು ವಾಹನಗಳು ಸಿಲುಕಿರುವ ಬಗ್ಗೆ ಮುಳುಗು ತಜ್ಞ ಈಶ್ವರ ಮಲ್ಪೆ ಮಾಹಿತಿ ನೀಡಿದ್ದಾರೆ. ಸ್ಕೂಟರ್ ಸಿಕ್ಕಿದ ಅನತಿ ದೂರದಲ್ಲಿ ಟಾಟಾ ಕಂಪನಿಯ ಟೈಯರ್ ಮಣ್ಣಿನಲ್ಲಿ ಹುದುಗಿದ್ದು, ಅದರ ಸಮೀಪವೇ ಇನ್ನೊಂದು ವಾಹನದ ತಗಡಿನ ಚೂರುಗಳಿವೆ. ಅಂದಾಜಿನ ಪ್ರಕಾರ ಇನ್ನೂ ಐದು ವಾಹನಗಳು ನದಿ ಆಳದಲ್ಲಿದ್ದು, ಸಾವನಪ್ಪಿದವರ ಸಂಖ್ಯೆ ಊಹಿಸಲು ಅಸಾಧ್ಯ ಎಂದವರು ಹೇಳಿದ್ದಾರೆ. ಅವರು ನೀಡಿದ ಮಾಹಿತಿಗೆ ಪೂರಕವಾಗಿ `ಹಿಂದೂಜಾ ಗ್ರೂಫ್’ಗೆ ಸೇರಿದ ಲಾರಿಯೊಂದರ ಇಂಜಿನ್ ಪ್ಲೇಟ್ ಪತ್ತೆಯಾಗಿದೆ. ಆದರೆ, ಈವರೆಗೂ ಈ ಲಾರಿ ಕಣ್ಮರೆಯಾದ ಬಗ್ಗೆ ಯಾವುದೇ ದೂರು ಇರಲಿಲ್ಲ.
ಶಿರೂರು ಗುಡ್ಡ ಕುಸಿತದಿಂದ ಈವರೆಗೆ 8 ಜನರ ಶವ ಸಿಕ್ಕಿದ್ದು ಮೂವರು ಕಣ್ಮರೆಯಾದ ಬಗ್ಗೆ ಅಂದಾಜಿಸಲಾಗಿದೆ. ಆದರೆ, ಈ ಮೂವರು ಮಾತ್ರವಲ್ಲದೇ ಇನ್ನಷ್ಟು ಜನ ನದಿ ಪಾಲಾಗಿರುವ ಬಗ್ಗೆ ಈಶ್ವರ ಮಲ್ಪೆ ಹೇಳಿದ್ದಾರೆ. ಜೊತೆಗೆ `ನದಿ ಆಳದಲ್ಲಿ ಗ್ಯಾಸ್ ಟ್ಯಾಂಕರ್ ದೊಡ್ಡ ಪ್ರಮಾಣದಲ್ಲಿ ಸ್ಪೋಟವಾಗಿದೆ. ಹೀಗಾಗಿಯೇ ಕೆಲ ವಾಹನಗಳ ಬಿಡಿಭಾಗಗಳು ಕರಕಲಾಗಿದೆ’ ಎಂದವರು ಹೇಳಿದ್ದಾರೆ. ನೀರಿನ ಒಳಗಿದ್ದರೂ ಲಾರಿಯ ಕ್ಯಾಬಿನ್ ಸುಟ್ಟಿರುವುದು ಇದಕ್ಕೆ ಸಾಕ್ಷಿಯಾಗಿದೆ. `ನದಿ ಪಾಲಾದ ವಾಹನಗಳು ಎಷ್ಟು? ಎಂದು ಖಚಿತವಾಗಿಲ್ಲ. ಆದರೆ, ಅಂಥ ವಾಹನಗಳು ಎಲ್ಲಿ ಸಿಲುಕಿದೆ? ಎಂದು ನಾನು ಗಮನಿಸಿದ್ದೇನೆ. ಆ ವಾಹನಗಳ ಒಳಭಾಗದಲ್ಲಿ ಇನ್ನಷ್ಟು ಶವಗಳಿರುವ ಸಾಧಯತೆಯಿದ್ದು, ಅವುಗಳನ್ನು ಹೊರತೆಗೆಯುವುದಕ್ಕಾದರೂ ತನಗೆ ಅನುಮತಿ ಅಗತ್ಯ’ ಎಂದು ಈಶ್ವರ ಮಲ್ಪೆ ಪ್ರತಿಪಾದಿಸಿದ್ದಾರೆ.
`ತಾನು ಲಾರಿ ಹುಡುಕಿದ ನಂತರ ಕೇನ್ ಮೂಲಕ ಅದನ್ನು ಮೇಲೆತ್ತಲಾಯಿತು. ತಾನು ಸ್ಕೂಟರ್ ಕಾಣಿಸಿ ಅದಕ್ಕೆ ಹಗ್ಗ ಕಟ್ಟಿದ ನಂತರ ಅದನ್ನು ಎಳೆದು ಮೇಲೆತ್ತಲಾಯಿತು. ಇದೀಗ ನದಿ ಆಳದಲ್ಲಿ ಇನ್ನಿತರ ವಾಹನಗಳಿರುವ ಬಗ್ಗೆಯೂ ನಾನು ಉಚಿತವಾಗಿ ಬಂದು ಮಾಹಿತಿ ನೀಡಲಿದ್ದು, ನನ್ನಿಂದ ರಕ್ಷಣಾ ಕಾರ್ಯಾಚರಣೆಗೆ ಅನುಕೂಲವೇ ಆಗಲಿದೆ’ ಎಂದವರು ಹೇಳಿದ್ದಾರೆ. ಆದರೆ, `ಬೇರೆ ಯಾವುದೋ ಉದ್ದೇಶದಿಂದ ನನ್ನನ್ನು ರಕ್ಷಣಾ ಕಾರ್ಯಾಚರಣೆಯಿಂದ ದೂರವಿಡಲಾಗಿದೆ. ಅಲ್ಲಿ ವಿಡಿಯೋ ಚಿತ್ರಿಕರಣಕ್ಕೂ ಅವಕಾಶ ಮಾಡಿಕೊಡದೇ ಇರುವುದು ಅನುಮಾನಗಳಿಗೆ ಕಾರಣ’ ಎಂದವರು ಹೇಳಿದ್ದಾರೆ.
`ತಮಗೆ ರಕ್ಷಣಾ ಕಾರ್ಯಾಚರಣೆಗೆ ಅನುಮತಿ ನೀಡುತ್ತಿಲ್ಲ’ ಎಂಬುದು ಈಶ್ವರ ಮಲ್ಪೆ ಅವರ ಗಂಭೀರ ಆರೋಪ. ತಾವು ಒಂದು ರೂ ಸಹ ಸರ್ಕಾರದಿಂದ ಹಣ ಪಡೆಯದೇ ಸ್ವಯಂ ಪ್ರೇರಣೆಯಿಂದ ಕಾರ್ಯಾಚರಣೆಗೆ ಆಗಮಿಸುತ್ತಿದ್ದು, ಅದಕ್ಕೂ ಸಹ ಅನುಮತಿ ಸಿಗುತ್ತಿಲ್ಲ. ಕೋಟಿ ರೂ ಹಣ ಪಡೆದು ಕಾರ್ಯಾಚರಣೆ ನಡೆಸುತ್ತಿರುವವರು ಡ್ರಜ್ಜಿಂಗ್ ಯಂತ್ರಗಳನ್ನು ಬಳಸಿ ಸೂಕ್ಷö್ಮ ವಿಚಾರಗಳನ್ನು ಮರೆಯುತ್ತಿದ್ದಾರೆ’ ಎಂದವರು ದೂರಿದ್ದಾರೆ.
ಇದನ್ನೂ ಓದಿ: ಅರ್ಜುನನ ಲಾರಿ ರಹಸ್ಯ: ಸತ್ಯ ಹೊರಬಂದರೆ ಸರ್ಕಾರಕ್ಕೆ ನಡುಕ
`ಗಂಗಾವಳಿ ರಹಸ್ಯ ಸಂಪೂರ್ಣವಾಗಿ ಹೊರಬರಲು ಇನ್ನೂ ಒಂದು ತಿಂಗಳ ನಿರಂತರ ಕಾರ್ಯಾಚರಣೆ ಅಗತ್ಯ. ನನಗೆ ಅನುಮತಿ ಕೊಟ್ಟರೆ ಒಂದು ತಿಂಗಳ ಕಾಲ ಹುಡುಕಿ ಇನ್ನಷ್ಟು ಜನರ ಶವ ಹೊರತೆಗೆಯಲು ಬದ್ಧ. ಇದಕ್ಕಾಗಿ ನನಗೆ ಪ್ರಶಸ್ತಿ ಕೊಡುವುದು ಬೇಡ, ಹಣ ನೀಡುವುದು ಬೇಡ’ ಎಂದವರು ಬೇಸರದಿಂದ ಮಾತನಾಡಿದ್ದಾರೆ. `ಜನ ನೀಡಿದ ಹಣದಲ್ಲಿ ನಾನು ಅಲ್ಲಿ ಬಂದು ಸೇವೆ ಮಾಡುವೆ. ನನಗೆ ಜಿಲ್ಲಾಡಳಿತ ಊಟದ ವ್ಯವಸ್ಥೆ ಮಾಡುವುದು ಸಹ ಬೇಡ’ ಎಂದವರು ಹೇಳಿದ್ದಾರೆ.
ಅದಾಗಿಯೂ ಅವರಿಗೆ ಕಾರ್ಯಾಚರಣೆಗೆ ಅನುಮತಿ ಸಿಕ್ಕಿಲ್ಲ.