ಕಾರವಾರ: ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಗೆ ಹಸಿರು ಪಟಾಕಿ ಮಾತ್ರ ಬಳಸಿ ಎಂದು ಸರ್ಕಾರ ಸಾರುತ್ತಿದೆ. ಆದರೆ, ಹಸಿರು ಪಟಾಕಿ ಎಂದು ಗುರುತಿಸುವುದು ಹೇಗೆ? ಎಂಬುದೇ ಹಲವರಿಗೆ ತಿಳಿದಿಲ್ಲ. `ಪಟಾಕಿ ಪೆಟ್ಟಿಗೆ ಮೇಲಿನ ಕೆಲ ಚಿಹ್ನೆಗಳನ್ನು ನೋಡಿ ಹಸಿರು ಪಟಾಕಿಯ ಬಗ್ಗೆ ಅರಿತುಕೊಳ್ಳಬಹುದು’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸ್ಪಷ್ಠಪಡಿಸಿದ್ದಾರೆ.
`ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ರಾತ್ರಿ 10 ಗಂಟೆ ನಂತರ ಪಟಾಕಿ ಹೊಡೆಯಲು ಅವಕಾಶವಿಲ್ಲ. ಪಟಾಕಿ ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದoತೆ ಎಚ್ಚರವಹಿಸಬೇಕು. ಆಸ್ಪತ್ರೆ, ಶಿಕ್ಷಣ ಸಂಸ್ಥೆ, ವೃದ್ಧಾಶ್ರಮ, ಅನಾಥಾಶ್ರಮಗಳ ಸುತ್ತ ಪಟಾಕಿ ಸಿಡಿಸಬಾರದು’ ಎಂದವರು ಹೇಳಿದ್ದಾರೆ. `ಪಟಾಕಿ ಸಿಡಿತದಿಂದ ಹೊರಬರುವ ಹೊಗೆಯಿಂದ ಅಸ್ತಮಾ ರೋಗಿಗಳು ಹೃದ್ರೋಗಿಗಳು, ವಯೋವೃದ್ಧರು, ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮವಾಗಲಿದ್ದು, ಇದಕ್ಕೆ ಅವಕಾಶ ಕೊಡಬೇಡಿ’ ಎಂದವರು ಮನವಿ ಮಾಡಿದ್ದಾರೆ.
`ಜಿಲ್ಲೆಯಲ್ಲಿನ ಎಲ್ಲಾ ಪಟಾಕಿ ಮಾರಾಟ ಮಾಡುವ ಮಳಿಗೆಗಳಿಗೆ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಸಾರ್ವಜನಿಕರು ಪಟಾಕಿ ಖರೀದಿಸುವ ಮುನ್ನ ಪಟಾಕಿಯ ಮೇಲಿರುವ ಹಸಿರು ಚಿಹ್ನೆಗಳನ್ನು ಪರೀಕ್ಷಿಸಿ ಖರೀದಿಸಬೇಕು. ಪಟಾಕಿಯನ್ನು ಸಿಡಿಸುವ ವೇಳೆ ಮಕ್ಕಳ ಸುರಕ್ಷತೆ ಕಡೆ ಗಮನವಿರಲಿ’ ಎಂದವರು ಹೇಳಿದ್ದಾರೆ. ಹಸಿರು ಪಟಾಕಿಯ ಮೇಲೆ ಹಸಿರು ಬಣ್ಣದಲ್ಲಿ ಚಿಹ್ನೆ ಮತ್ತು ಕ್ಯೂಆರ್ ಕೋಡ್‌ಗಳನ್ನು ಮುದ್ರಿಸಿದ್ದು, ಅಂತಹ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಮತ್ತು ಸಾರ್ವಜನಿಕರು ಉಪಯೋಗಿಸಲು ಅವಕಾಶವಿದೆ.