ಶಿರಸಿ: ಅಡಿಕೆ ಕದ್ದು ಪರಾರಿಯಾಗಿದ್ದ ಪ್ರಭಾಕರ ಭಂಡಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಸಂಗ್ರಹಿಸಿದ್ದ 30 ಸಾವಿರ ರೂ ಮೌಲ್ಯದ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಡಿಕೆ ಕಳ್ಳತನ ನಡೆದ ಬಗ್ಗೆ ಸೋಮವಾರ ಪ್ರಕರಣವೊಂದು ದಾಖಲಾಗಿದ್ದು, ಪೊಲಿಸರು ಅದರ ಬೆನ್ನು ಬಿದ್ದಿದ್ದರು. ಅನುಮಾನದ ಹಿನ್ನಲೆ ಬೊಮ್ಮನಳ್ಳಿಯ ಪ್ರಭಾಕರ ಗಣಪತಿ ಭಂಡಾರಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಪೊಲೀಸರನ್ನು ನೋಡಿ ಬೆವತ ಆತ ಅಡಿಕೆ ಕದ್ದಿರುವುದನ್ನು ಒಪ್ಪಿಕೊಂಡಿದ್ದ. ಎರಡು ಚೀಲದಲ್ಲಿ ತುಂಬಿದ್ದ ಅಡಿಕೆಯನ್ನು ಕಾಣಿಸಿದ್ದ.
75 ಕೆಜಿಯಷ್ಟು ಸುಲಿದ ಅಡಿಕೆಯನ್ನು ಜಪ್ತು ಮಾಡಿದ ಪೊಲೀಸರು ಪ್ರಭಾಕರ ಭಂಡಾರಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸಿಪಿಐ ಸೀತಾರಾಮ ಪಿಎಸ್‌ಐ ದಯಾನಂದ ಜೋಗಳೇಕರ್ ಹಾಗೂ ಪೊಲೀಸ್ ಸಿಬ್ಬಂದಿ ಮಹಾದೇವ ನಾಯಕ, ಗಣಪತಿ ನಾಯ್ಕ, ಯಲ್ಲಪ್ಪ ಪೂಜಾರಿ ಈ ಕಾರ್ಯಾಚರಣೆಯಲ್ಲಿದ್ದರು.