ಯಲ್ಲಾಪುರ: ಕುಂದರಗಿಯ ಸರ್ಕಾರಿ ಶಾಲೆಯ ಮೇಲ್ಬಾಗ ನಿರ್ಮಿಸಲಾದ ಕಟ್ಟಡಕ್ಕೆ ಕಿಟಕಿ-ಬಾಗಿಲುಗಳಿಲ್ಲ. ಅರೆಬರೆ ಕೆಲಸವಾದ ಕಾರಣ ಮಕ್ಕಳ ಕಲಿಕೆಗೂ ಕಟ್ಟಡ ಉಪಯೋಗವಾಗುತ್ತಿಲ್ಲ.
ಇಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ರಿಪೇರಿ, ಮೇಲ್ಚಾವಣಿ ನಿರ್ಮಾಣ ಹಾಗೂ ಕಲಿಕಾ ಕೇಂದ್ರದ ಅಭಿವೃದ್ಧಿಗಾಗಿ ಶಾಲಾ ಆಡಳಿತ ಮಂಡಳಿಯವರು ಒತ್ತಾಯಿಸಿದ್ದರು. ಈ ಹಿನ್ನಲೆ ಈ ಎಲ್ಲಾ ಕಾಮಗಾರಿಗಳನ್ನು ತಾಲೂಕು ಪಂಚಾಯತದಿoದ ಮಾಡುವ ಬಗ್ಗೆ ನಿರ್ಧರಿಸಲಾಯಿತು. ಆದರೆ, ಅನುದಾನ ವೆಚ್ಚವಾಯಿತೇ ವಿನ: ಕೆಲಸ ಮಾತ್ರ ಪೂರ್ತಿ ಆಗಲಿಲ್ಲ. ಕಳೆದ ಒಂದು ವರ್ಷದ ಹಿಂದೆ ಸ್ಥಗಿತವಾದ ಕೆಲಸ ಮತ್ತೆ ಮುಂದುವರೆಯಲಿಲ್ಲ.
8 ವರ್ಷದ ಹಿಂದೆ ನಿರ್ಮಿಸಲಾಗಿದ್ದ ಕಟ್ಟಡದ ಮೇಲೆ ಮೇಲ್ಚಾವಣಿ ನಿರ್ಮಿಸಲಾಗಿದ್ದು, ಅದಕ್ಕೆ ಕಿಟಕಿ ಬಾಗಿಲು ಅಳವಡಿಸಲಾಗಿಲ್ಲ. ನೆಲ ಸಮದಟ್ಟು ಮಾಡಲಿಲ್ಲ. ಪ್ಲಾಸ್ಟರ್ ಕೆಲಸವನ್ನು ನಿರ್ವಹಿಸಲಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಊರಿನವರು ದೂರು ನೀಡಿದರೂ ಪರಿಣಾಮ ಬೀರಲಿಲ್ಲ. ಪ್ರಸ್ತುತ ಕಿಟಕಿ-ಬಾಗಿಲುಗಳಿಲ್ಲದ ಶಾಲೆಯಿಂದ ಯಾರಿಗೂ ಪ್ರಯೋಜನವಿಲ್ಲ. ಶಾಲಾ ಅಭಿವೃದ್ಧಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
7ನೇ ತರಗತಿವರೆಗಿನ ಕುಂದರಗಿ ಶಾಲೆಯಲ್ಲಿ 75 ಮಕ್ಕಳಿದ್ದಾರೆ. ಅವರೆಲ್ಲರ ಶೈಕ್ಷಣಿಕ ಬದುಕಿಗೆ ಕಟ್ಟಡ ಪೂರ್ಣಗೊಳಿಸುವಿಕೆ ಅನಿವಾರ್ಯವಾಗಿದೆ. ಕಾಮಗಾರಿ ಅಪೂರ್ಣವಾಗಿರುವುದರಿಂದ ಆದ ಸಮಸ್ಯೆಗಳ ಬಗ್ಗೆ ಶಾಲಾ ಆಡಳಿತ ಮಂಡಳಿಯವರು ಜಯಕರ್ನಾಟಕ ಜನಪರ ವೇದಿಕೆಯವರಿಗೆ ಪತ್ರ ಬರೆದಿದ್ದಾರೆ.
`ಶಾಲೆ ಕಾಮಗಾರಿಯನ್ನು ಪೂರ್ಣಗೊಳಿಸಿ’ ಎಂದು ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ತಿಂಗಳ ಹಿಂದೆಯೇ ಆಗ್ರಹಿಸಿದ್ದಾರೆ. ತಾಲೂಕಾ ಅಧ್ಯಕ್ಷ ರಾಘವೇಂದ್ರ ನಾಯ್ಕ ಸ್ಥಳ ಪರಿಶೀಲನೆ ನಡೆಸಿ ಅವ್ಯವಸ್ಥೆಗಳನ್ನು ಪ್ರಶ್ನಿಸಿದ್ದಾರೆ. ಆದರೆ, ಅದಕ್ಕೆ ಸೂಕ್ತ ಉತ್ತರ ಸಿಕ್ಕಿಲ್ಲ.
`ಇನ್ನೂ ಒಂದು ತಿಂಗಳ ಒಳಗೆ ಕುಂದರ್ಗಿ ಶಾಲೆಯ ಅರೆಬರೆ ಕಾಮಗಾರಿಯನ್ನು ಕೂಡಲೇ ಮುಗಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಊರಿನವರ ಜೊತೆ ಪ್ರತಿಭಟಿಸುವುದು ನಿಶ್ಚಿತ’ ಎಂದು ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಎಚ್ಚರಿಸಿದ್ದಾರೆ.