ಕಾರವಾರ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಯಾಮಾರಿಸುತ್ತಿದ್ದ ಸದಾಶಿವಗಡದ ಆಚಾರಿವಾಡಾದ ಸೋನಿಯಾ (ರೋಷನ್ ಸೋಮನಾಥ ಆಚಾರಿ) ಎಂಬಾಕೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಸೋನಿಯಾಗೆ ಸಹಾಯ ಮಾಡಿದ್ದ ವಿಜಯಾ ಗಾವಡೆ ಎಂಬಾತರು ಸಹ ಮಾರ್ಗೋವಾ ಟೌನ್ ಪೊಲೀಸರ ಆತಿಥ್ಯದಲ್ಲಿದ್ದಾರೆ. ಈ ಇಬ್ಬರು ಅಮಾಯಕರನ್ನು ಗುರಿಯಾಗಿರಿಸಿಕೊಂಡು ಯಾಮಾರಿಸುತ್ತಿದ್ದರು. ಸುನೀಲ್ ಬೋರ್ಕರ್ ಎಂಬಾತರು ನೀಡಿದ ದೂರಿನ ಅನ್ವಯ ಗೋವಾ ಪೊಲೀಸರು ಕಾರ್ಯಾಚರಣೆ ನಡೆಸಿದರು. ಆಗ ಈ ಮೂವರು ಸಿಕ್ಕಿಬಿದ್ದಿದ್ದಾರೆ.
2020ರ ಜನವರಿ 20 ಮತ್ತು ಜೂನ್ 30ರ ನಡುವೆ ವಿಜಯಾ ಹಾಗೂ ಸೋನಿಯಾ ಕೆಲಸ ಕೊಡುವ ನೆಪದಲ್ಲಿ ಕಾಸು ಮಾಡಿಕೊಂಡಿದ್ದರು. ಆದರೆ, ಕೆಲಸ ಕೊಡಿಸಿರಲಿಲ್ಲ. 16,12,500 ರೂ ವಂಚನೆ ನಡೆದ ಬಗ್ಗೆ ಸುನೀಲ್ ಬೋರ್ಕರ್ ಪೊಲೀಸ್ ದೂರು ನೀಡಿದ್ದು, ಇಬ್ಬರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.