ಯಲ್ಲಾಪುರ: ಪ್ರತ್ಯೇಕ ಜಿಲ್ಲೆ, ಪ್ರತ್ಯೇಕ ರಾಜ್ಯದ ಕೂಗಿನ ನಡುವೆ ಬೈಲಂದೂರಿನ ಶಾಲಾ ಮಕ್ಕಳು ಪ್ರತ್ಯೇಕ ಶಾಲೆಗೆ ಬೇಡಿಕೆ ಇಟ್ಟಿದ್ದಾರೆ. `ಪ್ರತ್ಯೇಕ ಶಾಲೆ ನೀಡುವವರೆಗೂ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ’ ಎಂದು ಪಾಲಕರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಕಳೆದ ಒಂದು ತಿಂಗಳಿನಿoದ ಬೈಲಂದೂರು ಶಾಲೆಯ 30ರಷ್ಟು ಅಧಿಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ!
ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿಯ ಬೈಲಂದೂರು ಶಾಲೆಯಲ್ಲಿ 120 ಮಕ್ಕಳಿದ್ದಾರೆ. ಈ ಪೈಕಿ 30 ಮಕ್ಕಳ ಪಾಲಕರು ಪ್ರತ್ಯೇಕ ಶಾಲೆಗಾಗಿ ಬೇಡಿಕೆ ಸಲ್ಲಿಸಿದ್ದಾರೆ. ಕಳೆದ ಒಂದು ತಿಂಗಳಿನಿoದ ಇಲ್ಲಿನ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಹಾಗೂ ಪೊಲೀಸರು ಊರಿಗೆ ತೆರಳಿ ಮನವರಿಕೆ ಮಾಡಿದರೂ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿಲ್ಲ.
ಅಧ್ಯಕ್ಷ ಸ್ಥಾನದ ಹಪಾಹಪಿ!
ಬೈಲಂದೂರು ಶಾಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಯಾವುದೇ ಕೊರತೆಯಿಲ್ಲ. ಮೂಲಭೂತ ಸೌಕರ್ಯಕ್ಕೆ ಸಹ ಅಡೆತಡೆಗಳಿಲ್ಲ. ಅದಾಗಿಯೂ 30 ಪಾಲಕರು ಪ್ರತ್ಯೇಕ ಶಾಲೆಗೆ ಬೇಡಿಕೆ ಇಡುತ್ತಿರುವುದರ ಹಿಂದೆ `ಪ್ರತಿಷ್ಠೆ’ಯ ಪ್ರಶ್ನೆ ಕಾಣಿಸುತ್ತಿದೆ. `ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಸ್ಥಾನವನ್ನು ನಮಗೆ ಕೊಡಬೇಕು’ ಎಂದು ಒಂದು ಗುಂಪಿನವರು ಹೋರಾಟ ನಡೆಸಿದ್ದು, ಆ ಹೋರಾಟಕ್ಕೆ ಜಯ ಸಿಗದ ಕಾರಣ ಮಕ್ಕಳನ್ನು ಅವರು ಆ ಶಾಲೆಗೆ ಕಳುಹಿಸುತ್ತಿಲ್ಲ ಎಂಬುದು ಈವರೆಗೆ ಸಿಕ್ಕ ಮಾಹಿತಿ.
ಈ ಶಾಲೆಗೆ ಬರುವ ಅನೇಕ ಮಕ್ಕಳು ಹಿಂದುಳಿದ ಸಮುದಾಯದವರು. ಪಾಲಕರಲ್ಲಿಯೂ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡವರೇ ಅಧಿಕ. ಅದರಲ್ಲಿಯೂ ವರ್ಷದ ಮೂರು ತಿಂಗಳು ಕೆಲ ಪಾಲಕರು ಬೇರೆ ಕಡೆ ದುಡಿಯಲು ಹೋಗುತ್ತಾರೆ. ಆ ವೇಳೆ ಮಕ್ಕಳು ಸಹ ಅವರ ಜೊತೆ ಊರು ಬಿಡುತ್ತಾರೆ. ನಡುವೆ ಸಿಗುವ ಶೈಕ್ಷಣಿಕ ದಿನಗಳಲ್ಲಿ ಕಲಿತ ಪಾಠ ಮಾತ್ರ ಶಾಶ್ವತ. ಆದರೆ, ಇದೀಗ ಆ ಶಿಕ್ಷಣಕ್ಕೆ ಸಹ ಅಡ್ಡಿ ಉಂಟಾಗಿದೆ.
ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರುವುದು ಶಿಕ್ಷಣಾಧಿಕಾರಿಗಳ ಸಂಕಷ್ಟಕ್ಕೂ ಕಾರಣವಾಗಿದೆ. ಎರಡು ಗುಂಪುಗಳನ್ನು ಒಂದುಗೂಡಿಸುವ ಎಲ್ಲಾ ಪ್ರಯತ್ನವೂ ನಡೆದಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರ ಸಮ್ಮುಖದಲ್ಲಿ ಮಾತುಕಥೆ ನಡೆದರೂ ಶಾಲೆ ವಿಷಯದಲ್ಲಿ ಸಹಬಾಳ್ವೆ ನಡೆಸಲು ಕೆಲವರು ಒಪ್ಪುತ್ತಿಲ್ಲ. ಹೀಗಾಗಿ ಪಾಲಕರ ಪ್ರತಿಷ್ಠೆಯಿಂದ ಮಕ್ಕಳ ಶೈಕ್ಷಣಿಕ ಬದುಕಿಗೆ ದೊಡ್ಡ ಸಮಸ್ಯೆಯಾಗಿದೆ.
`ಪ್ರತ್ಯೇಕ ಶಾಲೆಗೆ ಬೇಡಿಕೆಯಿಟ್ಟು ಮಕ್ಕಳು ಶಾಲೆಗೆ ಬಾರದಿರುವುದು ಸತ್ಯ. 6-7ನೇ ತರಗತಿಯ ಕೆಲ ಮಕ್ಕಳು ಹೊಸಳ್ಳಿ ಶಾಲೆಗೆ ಸೇರಿದ್ದಾರೆ. ಶೈಕ್ಷಣಿಕ ವರ್ಷ ಮುಗಿಯುವ ಮುನ್ನ ಹೊಸ ಶಾಲೆಗೆ ಬೇಡಿಕೆ ಇಟ್ಟಿರುವುದು ಸಮಸ್ಯೆಯಾಗಿದೆ. ಅದಾಗಿಯೂ ಮಕ್ಕಳ ಶಿಕ್ಷಣ ಹಾಳಾಗಬಾರದು ಎಂಬ ದೃಷ್ಠಿಯಿಂದ ಅಲ್ಲಿನವರ ಬೇಡಿಕೆಗೆ ತಕ್ಕಂತೆ ಹೊಸ ಶಾಲೆಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ’ ಎಂದು ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಪ್ರತಿಕ್ರಿಯಿಸಿದರು.