ಅಂಕೋಲಾ: ಎಟಿಎಂ ಕೇಂದ್ರಕ್ಕೆ ಬರುವವರ ಪಾಸ್‌ವರ್ಡ ಕದ್ದು, ಕಾರ್ಡ ಬದಲಿಸಿ ಹಣ ಎಗರಿಸುತ್ತಿದ್ದ ವಂಚಕನನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಳ್ಳನನ್ನು ವಶಕ್ಕೆ ಪಡೆದ ಅಂಕೋಲಾ ಪೊಲೀಸರು ಆತನ ಬಳಿಯಿದ್ದ 25 ಸಾವಿರ ರೂ ಹಣವನ್ನು ಜಪ್ತು ಮಾಡಿದ್ದಾರೆ.
ಸೆ 22ರಂದು ಸಕಲಬೇಣದ ಸುರೇಖಾ ಸುಧೀರ ನಾಯ್ಕ ಅವರು ಅಂಕೋಲಾದ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ಹೋದಾಗ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಎದುರಾಗಿದ್ದ. ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಆತ ಸುರೇಖಾ ಅವರ ಎಟಿಎಂ ಪಾಸ್‌ವರ್ಡ’ನ್ನು ನೋಡಿಕೊಂಡಿದ್ದ. ಅದಾದ ನಂತರ ತನ್ನ ಬಳಿಯಿದ್ದ ಎಟಿಎಂ ಕಾರ್ಡನ್ನು ಅವರ ಕೈಗಿರಿಸಿ ಅವರ ಎಟಿಎಂ ಕಾರ್ಡನ್ನು ಜೇಬಿಗೆ ಇಳಿಸಿದ್ದ. ಸುರೇಖಾ ಅವರು ಅಲ್ಲಿಂದ ಹೊರಟ ನಂತರ ಕದ್ದ ಎಟಿಎಂ ಕಾರ್ಡ ಬಳಸಿ 40 ಸಾವಿರ ರೂಪಾಯಿ ಎಗರಿಸಿದ್ದ. ಅಪರಿಚಿತನಿಂದ ಅನ್ಯಾಯವಾದ ಬಗ್ಗೆ ಸುರೇಖಾ ಅವರು ಸೆ 22ರಂದು ಪೊಲೀಸ್ ದೂರು ದಾಖಲಿಸಿದ್ದರು.
ನ 8ರಂದು ಸಹ ಅಂಕೋಲಾಗೆ ಬಂದಿದ್ದ ಆತ ಅದೇ ಎಸ್‌ಬಿಐ ಎಟಿಎಂ ಕೇಂದ್ರದ ಎದುರು ಉಮೇಶ ವಾಸು ಗೌಡರನ್ನು ವಂಚಿಸಿದ್ದ. ಅವರಿಗೂ ಸಹಾಯ ಮಾಡುವ ನೆಪದಲ್ಲಿ ಕಾರ್ಡ ಬದಲಿಸಿ ನಂತರ ಕುಮಟಾಗೆ ತೆರಳಿ ಅವರ ಖಾತೆಯಲ್ಲಿದ್ದ 37 ಸಾವಿರ ರೂ ಹಣ ಪಡೆದಿದ್ದ. ಈ ಬಗ್ಗೆಯೂ ದೂರು ದಾಖಲಾದ ನಂತರ ಪೊಲೀಸರು ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ಪೊಲೀಸ್ ಅಧೀಕ್ಷಕ ಎಂ ನಾರಾಯಣ ನೇತ್ರತ್ವದಲ್ಲಿ ಕಳ್ಳನ ಹುಡುಕಾಟ ನಡೆದಿದ್ದು, ಡಿವೈಎಸ್‌ಪಿ ಗಿರೀಶ ಎಸ್ ವಿ ಹಲವು ಆಯಾಮದಲ್ಲಿ ತನಿಖೆ ನಡೆಸಿದರು. ಸಿಪಿಆಯ್ ಚಂದ್ರಶೇಖರ ಮಠಪತಿ, ಪಿಎಸ್‌ಐ ಜಯಶ್ರೀ ಪ್ರಭಾಕರ, ಉದ್ದಪ್ಪ ಧರೇಪ್ಪನವರ್ ಸೇರಿ ಚರ್ಚಿಸಿದಾಗ ಅರುಣಕುಮಾರ್ ಎಂಬಾತನ ಮೇಲೆ ಅನುಮಾನ ಮೂಡಿದ್ದವು.
ಪೊಲೀಸ್ ಸಿಬ್ಬಂದಿ ಮಹೇದೇವ ಸಿದ್ದಿ, ಅಂಬರೀಶ ನಾಯ್ಕ, ಆಸಿಪ್ ಆರ್ ಕೆ, ಮನೋಜ ಡಿ, ಶ್ರೀಕಾಂತ ಕಟಬರ, ರಯಿಸ ಭಗವಾನ್ ಸೇರಿ ಸಿಡಿಆರ್ ಸಿಬ್ಬಂದಿ ಉದಯ ಗುನಗಾ ಅವರ ನೆರವು ಯಾಚಿಸಿದರು. ವಿವಿಧ ತಂತ್ರಜ್ಞಾನಗಳನ್ನು ಬಳಸಿ ಆತನ ಹುಡುಕಾಟ ನಡೆಸಿದಾಗ ತುಮಕೂರಿನಲ್ಲಿ ಅರುಣಕುಮಾರ ಎಂಬಾತ ಸಿಕ್ಕಿಬಿದ್ದಿದ್ದ. ಕೂಡಲೇ ಅರುಣಕುಮಾರ ಮಲ್ಲೇಶಪ್ಪ ಮಾದೇನಳ್ಳಿಯನ್ನು ವಶಕ್ಕೆ ಪಡೆದ ಪೊಲೀಸರು ಆತನ ಬಳಿಯಿದ್ದ 25 ಸಾವಿರ ರೂ ಹಣದ ಜೊತೆ ಎಟಿಎಂ ಕಾರ್ಡು, ಮೊಬೈಲನ್ನು ಜಪ್ತು ಮಾಡಿದರು.
ATM ಕೇಂದ್ರದೊಳಗೆ ಅಪರಿಚಿತರ ಪ್ರವೇಶಕ್ಕೆ ಅವಕಾಶ ಕೊಡಬೇಡಿ. ನೀವು ಜಾಗೃತರಾಗಿರಿ