ಕುಮಟಾ: ಕಳೆದ ಒಂದು ದಶಕದಿಂದ ಈ ಊರಿನಲ್ಲಿ ಒಂದೇ ಒಂದು ಮದುವೆ ಆಗಿಲ್ಲ. ಮೇದಿನಿ ಗ್ರಾಮದಲ್ಲಿ 15ಕ್ಕೂ ಅಧಿಕ ಜನ ಮದುವೆಗೆ ಕನ್ಯೆಯ ಹುಡುಕಾಟದಲ್ಲಿದ್ದಾರೆ. ಆ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ ಸಿಗದಿರುವುದು ಹಾಗೂ ಊರಿಗೆ ತೆರಳಲು ರಸ್ತೆ ಇಲ್ಲದಿರುವುದೇ ಅಲ್ಲಿನ ಯುವಕರ ಕಂಕಣ ಭಾಗ್ಯಕ್ಕೆ ಅಡ್ಡಿಯಾಗಿದೆ. ಕುಗ್ರಾಮ ಎಂಬ ಕಾರಣದಿಂದ ಅಲ್ಲಿನವರಿಗೆ ಯಾರೂ ಕನ್ಯೆ ಕೊಡುತ್ತಿಲ್ಲ!
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಳಿಯ ಮೇದಿನಿ ಅತ್ಯಂತ ಸುಂದರ ಊರು. ಜಿಲ್ಲಾಧಿಕಾರಿಯಾಗಿದ್ದ ಹರೀಶಕುಮಾರ ಕೆ ಹಾಗೂ ಮುಲೈ ಮುಗಿಲಿನ್ ಸಹ ಆ ಊರಿನ ಸೌಂದಯಕ್ಕೆ ಮಾರು ಹೋಗಿದ್ದರು. ಆ ಊರಿನಲ್ಲಿ ಅವರು ವಾಸ್ತವ್ಯ ಹೂಡಿದ್ದರು. ಊರಿನವರ ಸಮಸ್ಯೆ ಆಲಿಸಿದ ಅವರು ಅದರ ಪರಿಹಾರಕ್ಕೂ ಪ್ರಯತ್ನಿಸಿದ್ದರು. ಆದರೆ, ಆ ಊರಿನ ರಸ್ತೆ ಸಮಸ್ಯೆ ಬಗೆಹರಿಯಲಿಲ್ಲ. ಊರಿಗೆ ರಸ್ತೆ ಆದರೂ ಇದ್ದರೆ ಹೆಣ್ಣಿನ ಕಡೆಯವರು ಗಂಡು ನೋಡಲು ಬರುತ್ತಿದ್ದರು. ರಸ್ತೆಯೇ ಇಲ್ಲದ ಕಾರಣ ಅರ್ದ ಘಟ್ಟ ಏರಿದವರು ಸಹ ಸಂಬoಧ ದೂರ ಮಾಡಿ ಮರಳುತ್ತಿದ್ದಾರೆ. ಮಕ್ಕಳ ಮದುವೆ ಮಾಡಬೇಕು ಎಂಬುದು ಇಲ್ಲಿನ ಅನೇಕ ಪಾಲಕರ ಕನಸು. ಆದರೆ, ಆ ಕನಸಿಗೆ ಪದೇ ಪದೇ ವಿಘ್ನವಾಗುತ್ತಿದೆ. ಮದುವೆ ಮಾತುಕಥೆ ನಡೆದ ನಂತರ ಮನೆ ನೋಡಲು ಬಂದವರು ಊರಿಗೆ ರಸ್ತೆ ಇಲ್ಲದಿರುವುದನ್ನು ಗಮನಿಸಿ ದೂರವಾಗಿದ್ದಾರೆ. ಇದನ್ನು ನೋಡಿದ ವೃದ್ಧ ಪಾಲಕರು ಹಾಸಿಗೆ ಹಿಡಿದಿದ್ದಾರೆ.
ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿಯೂ ಈ ಊರು ಹಿಂದಿದೆ. ಅನಾರೋಗ್ಯಕ್ಕೆ ಒಳಗಾದವರಿಗೆ ಕಂಬಳಿ ಜೋಳಿಗೆ ಕಟ್ಟಿ ಆಸ್ಪತ್ರೆಗೆ ತರುವ ಸ್ಥಿತಿಯಿದೆ. ಕೆಲ ವರ್ಷದ ಹಿಂದೆ ಬಾಣಂತಿಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತರಲಾಗದೇ ಅವರು ಸಾವನಪ್ಪಿದ ಕಹಿ ಈಗಲೂ ಕಾಡುತ್ತಿದೆ. ಇನ್ನೂ ಊರಿನ ಶಾಲೆ ಮುರಿದು ವರ್ಷ ಕಳೆದರೂ ಹೊಸ ಕಟ್ಟಡ ನಿರ್ಮಾಣವಾಗಿಲ್ಲ. 5ನೇ ತರಗತಿ ನಂತರ ಓದಲು ಆಸಕ್ತಿ ಇದ್ದರೂ ಅಲ್ಲಿನವರಿಗೆ ಅವಕಾಶಗಳಿಲ್ಲ. ವಿದ್ಯುತ್, ಪಡಿತರ ಸೇರಿದಂತೆ ಹಲವು ಸೌಕರ್ಯಗಳನ್ನು ಸರ್ಕಾರ ಕೊಟ್ಟರೂ ಅದರಿಂದ ಪ್ರಯೋಜನವಿಲ್ಲ. ಮೇದಿನಿ ಊರಿನಲ್ಲಿ 60 ಮನೆಗಳಿವೆ. 250ಕ್ಕೂ ಅಧಿಕ ಜನರಿದ್ದಾರೆ. ಕುಮಟಾ-ಸಿದ್ದಾಪುರ ಮುಖ್ಯ ರಸ್ತೆಯಿಂದ 8 ಕಿ.ಮೀ ದೂರದ ಊರಿಗೆ ತೆರಳಲು 3ಕಿಮೀ ರಸ್ತೆಯಿಲ್ಲ. ಆ ರಸ್ತೆ ನಿರ್ಮಿಸಿದರೆ ಶೇ 50ರಷ್ಟು ಸಮಸ್ಯೆ ಬಗೆಹರಿಯಲಿದೆ. ರೋಗಿಗಳನ್ನು ಕಂಬಳಿ ಹಿಡಿದು ಸಾಗಿಸುವ ರಸ್ತೆ ಮಳೆಗಾಲಕ್ಕೆ ಉಪಯೋಗಕ್ಕಿಲ್ಲ.
ಈಡೇರದ ಇನ್ಪೋಸಿಸ್ ಭರವಸೆ
ಮೇದಿನಿ ಸಮಸ್ಯೆ ಬಗ್ಗೆ ಮಾಧ್ಯಮದಲ್ಲಿ ಪ್ರಕಟವಾದ ವರದಿ ಗಮನಿಸಿದ್ದ ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ 2019ರಲ್ಲಿ ಗ್ರಾಮಕ್ಕೆ ರಸ್ತೆ ನಿರ್ಮಿಸುವ ಭರವಸೆ ನೀಡಿದ್ದರು. ಇನ್ಫೊಸಿಸ್ ಸಂಸ್ಥೆಯ ಸಿಎಸ್‌ಆರ್ ಅನುದಾನವನ್ನು ಅಲ್ಲಿ ಬಳಸುವುದಾಗಿ ವಾಗ್ದಾನ ಮಾಡಿದ್ದರು. ಆದರೆ, ನಂತರ ಆ ಬಗ್ಗೆ ಅವರಿಗೆ ನೆನಪಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಗ್ರಾಮದಲ್ಲಿರುವ ಬಹುತೇಕರು ಅನಕ್ಷರಸ್ಥರಾದ ಕಾರಣ ಸುಧಾಮೂರ್ತಿ ಅವರನ್ನು ಭೇಟಿ ಮಾಡಲು ಆಗಲಿಲ್ಲ.
ಶಾಸಕರ ವಿರುದ್ಧ ಅಸಮಧಾನ
ಕುಮಟಾ ವಿಧಾನಸಭಾ ಶಾಸಕ ದಿನಕರ ಶೆಟ್ಟಿ ಸಹ ಈ ಊರಿನ ಸಮಸ್ಯೆ ಆಲಿಸುತ್ತಿಲ್ಲ. ಊರಿನವರೆಲ್ಲ ಸೇರಿ ಮನವಿ ಮಾಡಿದಾಗ `ನೀವು ನನಗೆ ಮತ ಕೊಟ್ಟಿಲ್ಲ’ ಎಂದು ಅವರು ಹೇಳಿದ ಬಗ್ಗೆ ಜನ ದೂರಿದ್ದಾರೆ. `ನಮ್ಮ ಮತದಿಂದಲೇ ರಸ್ತೆ ನಿರ್ಮಾಣಕ್ಕೆ ಅಡ್ಡಿ ಆಗುತ್ತಿದ್ದರೆ ಮತ್ತೆ ಯಾರಿಗೂ ಮತ ಹಾಕುವುದಿಲ್ಲ’ ಎಂದು ಅಲ್ಲಿನ ಹನುಮಂತ ಗೌಡ ಬೇಸರದಿಂದ ಮಾತನಾಡಿದರು.