ಕುಮಟಾ: ಪಟ್ಟೆ ವಿನಾಯಕ ಮಂದಿರದ 50ನೇ ಕಾರ್ತಿಕ ದೀಪೋತ್ಸವದ ಅಂಗವಾಗಿ ಕೋಟಿತೀರ್ಥಕ್ಕೆ ಅಳವಡಿಸಿದ ದೀಪಾಲಂಕಾರ ನೋಡುಗರ ಮನಸಿಗೆ ಮದ ನೀಡಿತು.
ವೆಂಕಟರಮಣ ಮಂದಿರದಿoದ ಕೋಟಿತೀರ್ಥಕ್ಕೆ ಬರುವ ಮಾರ್ಗದೂದ್ದಕ್ಕೂ ಮಂಗಳವಾರ ರಾತ್ರಿಯಿಡೀ ದೀಪ ಬೆಳಗಿದವು. ಕೋಟಿತೀರ್ಥ ಕಟ್ಟೆಯ ಮೇಲೆ ಹಣತೆಯ ದೀಪಗಳನ್ನು ಅಲಂಕರಿಸಲಾಗಿದ್ದು, ಸಿಡಿಮದ್ದಿನ ಅಬ್ಬರದಲ್ಲಿ ಮೂಡಿದ ಬೆಳಕು ಜನರನ್ನು ಆಕರ್ಷಿಸಿತು.
ವಾದ್ಯಘೋಷ, ಚಂಡೆನಾದ ಉತ್ಸವಕ್ಕೆ ಮೆರಗು ತಂದಿತ್ತು. ಉತ್ಸವ ಬರುವ ಮಾರ್ಗದಲ್ಲಿ ರಂಗೋಲಿ ಹಾಕಿ ಮಾವಿನ ತೋರಣಗಳಿಂದ ಅಲಂಕರಿಸಲಾಗಿತ್ತು. ಮಂಗಳವಾರ ಮುಂಜಾನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಸಂಜೆ ನಾಗಬೀದಿಯಿಂದ ಮಹಾಬಲೇಶ್ವರ ಮಂದಿರದವರೆಗೆ ಉತ್ಸವಗಳು ನಡೆದವು. ನಂತರ ಅಷ್ಟಾವಧಾನ ಸೇವೆ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.
ರಾತ್ರಿ ಮಂದಿರದ ಆವಾರದಲ್ಲಿ ಕಿರುಮಂಜೇಶ್ವರದ ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟ್ ಸಂಯೋಜನೆಯಲ್ಲಿ `ಮಹಿಷ ವಧೆ’ ಯಕ್ಷಗಾನ ನಡೆದಿದ್ದು, ಪುಣ್ಯಾಶ್ರಮದ ರಾಜಗೋಪಾಲ ಅಡಿ ಅವರು ಇದರ ಉಸ್ತುವಾರಿ ನೋಡಿಕೊಂಡರು.