ಸಿದ್ದಾಪುರ: ಚಲಿಸುತ್ತಿದ್ದ ಕಾರಿಗೆ ಎದುರಿನಿಂದ ಬಂದ ಬಸ್ಸು ಗುದ್ದಿದ ಪರಿಣಾಮ ಶಿವಮೊಗ್ಗ ಮೂಲದ ಇಂಜಿನಿಯರ್ ಹಾಗೂ ಅವರ ಪತ್ನಿ ಗಾಯಗೊಂಡಿದ್ದಾರೆ.
ನ 22ರಂದು ಇಂಜಿನಿಯರ್ ಮುರುಳಿ ಎಸ್ (34) ಅವರು ತಮ್ಮ ಐಷಾರಾಮಿ ಕಾರಿನಲ್ಲಿ ಪತ್ನಿ ಜಯಶ್ರೀ (22) ಜೊತೆ ಸಂಚರಿಸುತ್ತಿದ್ದರು. ಹೊನ್ನಾವರ-ಮಂಗಳೂರು ರಸ್ತೆಯ ಮಾವಿನಗುಂಡಿ ಹೇಜನಿ ತಿರುವಿನಲ್ಲಿ ಎದುರಿನಿಂದ ಬಂದ ಖಾಸಗಿ ಬಸ್ಸು ಅವರ ಕಾರಿಗೆ ಗುದ್ದಿತು. ಹೊನ್ನಾವರದಿಂದ ಸಾಗರ ಕಡೆ ವೇಗವಾಗಿ ಬಸ್ಸು ಓಡಿಸಿದ ಬೆಂಗಳೂರಿನ ಬಸ್ ಚಾಲಕ ಅನೀಲಕುಮಾರ ಈ ಅಪಘಾತಕ್ಕೆ ಕಾರಣ ಎಂಬುದು ಮುರುಳಿ ಅವರ ದೂರು.
ಈ ಅಪಘಾತದಲ್ಲಿ ಕಾರು ನುಚ್ಚುನೂರಾಗಿದ್ದು, ಬಸ್ಸಿನ ಮುಂದಿನ ಭಾಗ ಜಖಂ ಆಗಿದೆ. ಮುರುಳಿ ಅವರ ಕಾಲಿನ ಪಾದ, ಎದೆ, ಕೈ ಬೆರಳಿಗೆ ಗಾಯವಾಗಿದೆ. ಜಯಶ್ರೀ ಅವರ ಕಾಲು, ಪಾದ, ಮೊಣಕಾಲಿಗೆ ಪೆಟ್ಟಾಗಿದೆ. ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರು ಚಾಲಕನ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.