ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳಬೇಕಾದ ರೈಲ್ವೇ ಯೋಜನೆಗಳ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರೈಲ್ವೇ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
`ಹುಬ್ಬಳ್ಳಿ-ಅಂಕೋಲಾ, ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದ ಡಿಪಿಆರ್ ಆದಷ್ಟು ಶೀಘ್ರವಾಗಿ ಮುಕ್ತಾಯಗೊಳಿಸಬೇಕು’ ಎಂದು ಕಾಗೇರಿ ಈ ಸಭೆಯಲ್ಲಿ ಹೇಳಿದರು. ಡಿಪಿಆರ್ ವರದಿಯನ್ನು ರೈಲ್ವೇ ಇಲಾಖೆಗೆ ಕಳುಹಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಸಚಿವರಲ್ಲಿ ವಿನಂತಿಸಿದರು. ಇದರೊಂದಿಗೆ` ದಾಂಡೇಲಿಗೆ ರೈಲ್ವೆ ಪುನಃ ಪ್ರಾರಂಭಿಸಬೇಕು. ಖಾನಾಪುರ ರೈಲ್ವೆ ನಿಲ್ದಾಣ ಸುಧಾರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಲೋಂಡಾ ನಿಲ್ದಾಣ ಕಾಮಗಾರಿ ತ್ವರಿತವಾಗಿ ಮುಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದರು.
ಸಚಿವ ಸೋಮಣ್ಣ ಪ್ರತಿಕ್ರಿಯಿಸಿ `ಅಂಕೋಲಾ-ಹುಬ್ಬಳ್ಳಿ ಡಿಪಿಆರ್ ಸಿದ್ಧತೆ ಪ್ರಾರಂಭವಾಗಿದ್ದು, ಜನೆವರಿ ಕೊನೆಯೊಳಗೆ ಮುಗಿಸಿ ರೈಲ್ವೆ ಬೋರ್ಡ್ಗೆ ಕಳುಹಿಸಬೇಕು’ ಎಂದರು. `ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಅಂತಿಮ ಹಂತದ ಸರ್ವೇ ಕೆಲಸ ಶುರುವಾಗಿದೆ. ಈ ಬಗ್ಗೆ ಜುಲೈರೊಳಗೆ ಡಿಪಿಆರ್‌ನ್ನು ರೈಲ್ವೆ ಬೋರ್ಡ್ಗೆ ರವಾನಿಸಬೇಕು. `ದಾಂಡೇಲಿ ರೈಲ್ವೆ ಪುನಃ ಪ್ರಾರಂಭಿಸುವುದು, ಖಾನಾಪುರ ರೈಲ್ವೆ ನಿಲ್ದಾಣ ಸುಧಾರಣೆ ಹಾಗೂ ಲೋಂಡಾ ನಿಲ್ದಾಣ ಕಾಮಗಾರಿ ತ್ವರಿತವಾಗಿ ಮುಕ್ತಾಯಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.