ಹೊನ್ನಾವರ: `ಬುಡಕಟ್ಟು ಜನರಿಗೆ ಅರಣ್ಯ ಭೂಮಿ ಹಕ್ಕು ನೀಡಿದ ಮಾದರಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳಿಗೂ ಭೂಮಿಯ ಹಕ್ಕು ನೀಡಬೇಕು. ಇದಕ್ಕಾಗಿ ಇತರ ಪಾರಂಪರಿಕ ಅರಣ್ಯವಾಸಿ ಎಂಬ ವಾಖ್ಯಾನಕ್ಕೆ ತಿದ್ದುಪಡಿ ಅಗತ್ಯ’ ಎಂದು ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ (ಭೂಮಿ ಹಕ್ಕು) ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾoತ ಕೊಚರೇಕರ ಹೇಳಿದ್ದಾರೆ. `ತಿದ್ದುಪಡಿಯ ಕುರಿತು ಸ್ಪಷ್ಟತೆ ಬಯಸಿ ರಾಜ್ಯ ಸರ್ಕಾರ ಕೇಂದ್ರದ ಮೊರೆ ಹೋಗಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
`ಈ ಹಿಂದೆ ತಿರಸ್ಕಾರವಾದ ಅರಣ್ಯ ಹಕ್ಕು ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಎರಡು ತಿಂಗಳ ಅವಧಿ ನೀಡಿ ಆದೇಶ ನೀಡಲಾಗಿದೆ. ಇದು ಉಚ್ಚ ನ್ಯಾಯಾಲಯದ ನಿರ್ದೇಶನಗಳ ಉಲ್ಲಂಘನೆಯಾಗಿದೆ. ಈ ಅರ್ಜಿಗಳ ಪುನರ್ ಪರಿಶಿಲನೆ ಮೊದಲು ಮೂರು ತಲೆಮಾರಿನ ಪೂರ್ವದ ಮಾನದಂಡದ ಬಗೆಗಿನ ಗೊಂದಲಗಳನ್ನು ಬಗೆಹರಿಸಬೇಕು’ ಎಂದವರು ಹೇಳಿದ್ದಾರೆ.
`ಬುಡಕಟ್ಟು ಹೊರತಾದ ಇತರ ಸಮುದಾಯಗಳ ಪಾರಂಪರಿಕ ಅರಣ್ಯವಾಸಿಗಳಿಗೂ ಸಹ ಬುಡಕಟ್ಟು ಜನರಿಗೆ ನೀಡಿದ ಮಾದರಿಯಲ್ಲಿ ವಸತಿ ಮತ್ತು ಜೀವನೋಪಾಯಕ್ಕೆ ಭೂಮಿಯ ಹಕ್ಕು ನೀಡಬೇಕು. 2005ರ ಪೂರ್ವದಿಂದ ಅರಣ್ಯ ಭೂಮಿಯಲ್ಲಿ ಮಾಡಲಾದ ಬಗರ್ ಹುಕುಂ ಸಾಗುವಳಿಯನ್ನು ಗುರುತಿಸಿ ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ. `ಮೂರು ತಲೆಮಾರುಗಳ ಪೂರ್ವದ ರಹವಾಸಿ ವ್ಯಾಖ್ಯೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಈ ಬಗ್ಗೆ ಕೇಂದ್ರ ಬುಡಕಟ್ಟು ಮಂತ್ರಾಲಯವು ಸೂಕ್ತ ಸ್ಪಷ್ಟನೆ ನೀಡಿದ ನಂತರವೂ ಉಪವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಗಳು ನೈಸರ್ಗಿಕ ನ್ಯಾಯ ನಿಯಮಗಳಿಗೆ ವಿರುದ್ಧವಾಗಿ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ’ ಎಂದು ಚಂದ್ರಕಾ0ತ ಕೊಚರೇಕರ ಅಸಮಧಾನ ವ್ಯಕ್ತಪಡಿಸಿದರು.
`ಅರಣ್ಯ ಹಕ್ಕು ಅರ್ಜಿಗಳ ಮರುಪರಿಶೀಲನೆ ಕಾರ್ಯಕ್ಕೂ ಮೊದಲು ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಹೋರಾಟ ಸಂಘಟನೆಗಳ ಪ್ರಮುಖರೊಂದಿಗೆ ಸಭೆ ನಡೆಯಬೇಕು. ಇತರ ಪಾರಂಪರಿಕ ಅರಣ್ಯವಾಸಿ ಅಂದರೆ 2005ರ ಪೂರ್ವದಿಂದ ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿರುವ ಬುಡಕಟ್ಟು ಹೊರತಾದ ಇತರ ಸಮುದಾಯದ ಯಾವುದೇ ವ್ಯಕ್ತಿ ಎಂದು ತಿದ್ದುಪಡಿ ತರಬೇಕು’ ಎಂದವರು ಆಗ್ರಹಿಸಿದ್ದಾರೆ.