ಅಂಕೋಲಾ: ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸ್ಥಳೀಯರಿಂದ ಭಾರೀ ಪ್ರಮಾಣದ ವಿರೋಧ ವ್ಯಕ್ತವಾಗಿದೆ. `ಈಗಾಗಲೇ ಸೀಬರ್ಡ ನೌಕಾನೆಲೆ ಸೇರಿ ಹಲವು ಯೋಜನೆಗಳಿಂದ ಜನ ನಿರಾಶ್ರಿತರಾಗಿದ್ದು, ಮತ್ತೆ ಇಲ್ಲಿನವರು ಅತಂತ್ರರಾಗುವುದು ಬೇಡ’ ಎಂದು ಅನೇಕರು ಪ್ರತಿಭಟನಾ ಮಾತುಗಳನ್ನಾಡಿದ್ದಾರೆ.
ಅಂಕೋಲಾದ ಸತ್ಯಾಗ್ರಹ ಭವನದಲ್ಲಿ ಬುಧವಾರ ಸಾರ್ವಜನಿಕ ಅಹವಾಲು ಸಭೆ ನಡೆದಿದ್ದು, `ಬಂದರು ಸರ್ವೇ ಕಾರ್ಯವನ್ನು ಮೊಟಕುಗೊಳಿಸಬೇಕು’ ಎಂದು ಮೀನುಗಾರರು ಪಟ್ಟು ಹಿಡಿದರು. ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳಿ ತರಾಟೆಗೆ ತೆಗೆದುಕೊಂಡರು. `ಸೀಬರ್ಡ ನಿರಾಶ್ರೀತರಿಗೂ ಸಾಕಷ್ಟು ಭರವಸೆ ನೀಡಿ ಒಕ್ಕಲೆಬ್ಬಿಸಲಾಯಿತು. ಆದರೆ, ಅವರ ಸಮಸ್ಯೆ ಆಲಿಸಿದವರಿಲ್ಲ’ ಎಂದು ಹಳೆಯದನ್ನು ನೆನಪಿಸಿಕೊಂಡರು.
ಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಈ ಬಗ್ಗೆಯೂ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು. `ಯೋಜನೆ ಶುರು ಆಗುವ ಮುನ್ನ ಸಭೆ ನಡೆಸಿಲ್ಲ. ಸರ್ವೇ ಹಂತದಲ್ಲಿ ಸಭೆ ನಡೆಸುತ್ತಿದ್ದು, ಇಷ್ಟೊಂದು ಪೊಲೀಸರ ಮೂಲಕ ನಿಗಾ ಇರಿಸಲು ನಾವೇನು ಭಯೋತ್ಪಾದಕರಾ?’ ಎಂದು ಸಭೆಯಲ್ಲಿದ್ದವರು ಪ್ರಶ್ನಿಸಿದರು. ಮೀನುಗಾರರ ಮುಖಂಡ ಶ್ರೀಕಾಂತ ದುರ್ಗೇಕರ ಮಾತನಾಡಿ `ಮೀನುಗಾರರಿಗೆ ಮೀನುಗಾರಿಕೆ ಬಂದರು ಅಭಿವೃದ್ಧಿ ಬೇಕು. ವಾಣಿಜ್ಯ ಬಂದರು ಅಗತ್ಯವಿಲ್ಲ’ ಎಂದರು. ಗಣಪತಿ ಮಾಂಗ್ರೆ ಮಾತನಾಡುವಾಗ ಅವರ ಮಾತು ತಡೆಯಲು ಯತ್ನಿಸಿದ ಅಧಿಕಾರಿಗಳ ವಿರುದ್ಧ ಮೀನುಗಾರರ ಫೆಡರೇಶನ್ ನಿರ್ದೇಶಕ ರಾಜು ಹರಿಕಂತ್ರ ಕಿಡಿಕಾರಿದರು.
ಬಂದರು ನಿರ್ಮಾಣ ಗುತ್ತಿಗೆ ಪಡೆದ ಜೆ ಎಸ್ ಡಬ್ಲ್ಯೂ ಕಂಪನಿ ಪರವಾಗಿ ಹಾಜರಿದ್ದ ಭರಮಪ್ಪ ಮೀನುಗಾರರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೆ, ಪ್ರಯೋಜನವಾಗಲಿಲ್ಲ. ಮೀನುಗಾರರ ಆಕ್ರೋಶಕ್ಕೆ ಮಣಿದ ಅವರು ಸಮುದ್ರದಲ್ಲಿ ಲಂಗರು ಹಾಕಿದ ಸರ್ವೇ ಬೋಟ್ ಬೇರೆ ಕಡೆ ಒಯ್ಯುವುದಾಗಿ ಒಪ್ಪಿಕೊಂಡರು. ಕಾಮಗಾರಿಯನ್ನು ನಿಲ್ಲಿಸುವುದಾಗಿ ಹೇಳಿದರು.