ಕಾರವಾರ: `ಮಾನವನ ಮರಣಕ್ಕೆ ಕಾರಣವಾಗುವ ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಇಲಾಖೆ ಇಲಾಖೆ ನಡುವೆ ಸಮನ್ವಯ ಅಗತ್ಯ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗನ ಕಾಯಿಲೆ ಪ್ರಸರಣ ತಡೆಯುವ ಮತ್ತು ನಿಯಂತ್ರಿಸುವ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿ ಸಭೆ ನಡೆಸಿದ ಅವರು ವಿವಿಧ ಸೂಚನೆಗಳನ್ನು ನೀಡಿದರು. `ಮಂಗನ ಕಾಯಿಲೆ ಬಾಧಿತ ಪ್ರದೇಶಗಳಲ್ಲಿನ ಮನೆಗಳಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ಕೊಡಬೇಕು. ಆಶಾ ಕಾರ್ಯಕರ್ತೆಯರು ನಿಯಮಿತವಾಗಿ ಗಮನಿಸಿ ಜ್ವರದ ಪ್ರಕರಣಗಳನ್ನು ಪತ್ತೆ ಮಾಡಬೇಕು. ಇದರೊಂದಿಗೆ ಶಾಲಾ ಕಾಲೇಜು, ಗ್ರಾಮ ಪಂಚಾಯತದಲ್ಲಿಯೂ ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.
`ಗ್ರಾಮ ಪಂಚಾಯತ ಅಧಿಕಾರಿಗಳು ಈ ಬಗ್ಗೆ ವರದಿ ಸಲ್ಲಿಸಬೇಕು. ಶಂಕಿತ ಪ್ರಕರಣಗಳಿದ್ದರೆ ಆರೋಗ್ಯ ಇಲಾಖೆಯವರು ಚಿಕಿತ್ಸೆ ನೀಡಬೇಕು. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಅಗತ್ಯ ಹಾಸಿಗೆ ಮೀಸಲಿಡಬೇಕು’ ಎಂದು ಹೇಳಿದರು. ಆರೋಗ್ಯ ಇಲಾಖೆಯ ಜೊತೆ ಅರಣ್ಯ, ಪಶುಪಾಲನಾ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಶಿಕ್ಷಣ ಇಲಾಖೆಯವರು ಸಮನ್ವಯ ಸಾಧಿಸಿ ಮಂಗನ ಕಾಯಿಲೆ ನಿಯಂತ್ರಿಸಬೇಕು’ ಎಂದರು.