ಯಲ್ಲಾಪುರ: ಕಳೆದ ಒಂದು ವಾರಗಳಿಂದ ಶಿರಸಿ – ಯಲ್ಲಾಪುರ ರಸ್ತೆ ಮಾರ್ಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೇರೆ ಊರಿನ ನಾಯಿಗಳನ್ನು ನಿರಂತರವಾಗಿ ಇಲ್ಲಿ ತಂದು ಬಿಡಲಾಗುತ್ತಿದ್ದು, ಅಲ್ಲಲ್ಲಿ ಗುಂಪು ಗುಂಪಾಗಿ ನಾಯಿಗಳು ಸಾವನಪ್ಪುತ್ತಿವೆ.
ಒಂದೇ ಕಡೆ 30-40 ನಾಯಿಗಳ ಶವ ಬಿದ್ದಿರುವುದರಿಂದ ವಿಷ ಪ್ರಾಶನದಿಂದ ನಾಯಿಗಳನ್ನು ಕೊಲ್ಲುತ್ತಿರುವ ಅನುಮಾನಗಳು ವ್ಯಕ್ತವಾಗಿದೆ. ಕಳೆದ ಶನಿವಾರ ಒಂದಷ್ಟು ನಾಯಿಗಳು ಮಂಚಿಕೇರಿ ಬಳಿಯ ತೂಕದಬೈಲ್ ಬಳಿ ಕಾಣಿಸಿಕೊಂಡಿದ್ದವು. ಅದೇ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ 30ಕ್ಕೂ ಅಧಿಕ ನಾಯಿಗಳ ಶವ ಬಿದ್ದಿದ್ದು, ಇದೀಗ ದುರ್ವಾಸನೆ ಬೀರುತ್ತಿದೆ.
ಇನ್ನೂ ರಸ್ತೆಯ ತುಂಬೆಲ್ಲ ನಾಯಿಗಳ ಓಡಾಟ ಕಾಣಿಸುತ್ತಿದೆ. ರೋಗಗ್ರಸ್ಥ ನಾಯಿಗಳು ಇಲ್ಲಿ ಹೆಚ್ಚಿದ್ದು, ಬೈಕ್ ಸವಾರರ ಮೇಲೆ ಆಕ್ರಮಣ ನಡೆಸಿದ ದೂರುಗಳಿವೆ. ಕೆಲ ನಾಯಿಗಳು ಜೊಲ್ಲು ಸುರಿಸುತ್ತಿದ್ದರೆ ಇನ್ನೂ ಕೆಲವು ನಾಯಿಗಳ ದೇಹ ಗಾಯ-ಕಜ್ಜಿಗಳಿಂದ ಕೂಡಿವೆ.
ಸಾವನಪ್ಪಿದ ನಾಯಿಗಳ ಶವ ಇದೀಗ ಕೊಳೆಯುತ್ತಿದ್ದು, ಆ ಪರಿಸರ ಹಾಳಾಗಿದೆ. ಹೀಗಾಗಿ ಆ ಭಾಗದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಇನ್ನು ವಿಷ ಪ್ರಾಶನದಿಂದ ಆ ನಾಯಿಗಳು ಸಾವನಪ್ಪಿದ್ದರೆ ಆ ನಾಯಿಗಳನ್ನು ಭಕ್ಷಿಸುವ ವನ್ಯಜೀವಿ-ಪಕ್ಷಿಗಳ ಆರೋಗ್ಯದ ಮೇಲೆಯೂ ದುಷ್ಪರಿಣಾಮವಾಗುವ ಸಾಧ್ಯತೆಗಳಿವೆ.
`ಟ್ರಕ್ ಮೂಲಕ ನಾಯಿಗಳನ್ನು ಬಿಟ್ಟಿರುವ ಬಗ್ಗೆ ಜನ ಪಂಚಾಯತಗೆ ತಿಳಿಸಿದ್ದರು. ನಾಯಿ ತಂದುಬಿಟ್ಟವರು ಯಾರು? ಎಂದು ಗೊತ್ತಾಗಿಲ್ಲ. ನಾಯಿ ಸಾವನಪ್ಪಿದ ಬಗ್ಗೆಯೂ ಮಾಹಿತಿ ಇರಲಿಲ್ಲ’ ಎಂದು ಕಂಪ್ಲಿ ಗ್ರಾ ಪಂ ಅಧ್ಯಕ್ಷೆ ರೇಣುಕಾ ಬೋವಿವಡ್ಡರ್ ಪ್ರತಿಕ್ರಿಯಿಸಿದರು. ನಿಯಮಾವಳಿಗಳ ಪ್ರಕಾರ ಗ್ರಾಮದಲ್ಲಿಯೇ ವಾಸವಿದ್ದು, ಜನರ ಸಮಸ್ಯೆ ಆಲಿಸಬೇಕಿದ್ದ ಹಾಗೂ ಗ್ರಾಮದ ನೈರ್ಮಲ್ಯ ಕಾಪಾಡುವ ಹೊಣೆ ಹೊತ್ತಿರುವ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ರವಿ ಪಟಗಾರ್ ಅವರಿಗೆ ಮೂರು ಬಾರಿ ಫೋನ್ ಮಾಡಿದರೂ ಫೋನ್ ಕರೆ ಸ್ವೀಕರಿಸಲಿಲ್ಲ.
ಮರಳಿ ಫೋನ್ ಮಾಡಿದ ಪಿಡಿಓ
`ಶಿರಸಿ ಬದಿಯಿಂದ ಕಲಘಟಕಿಯವರೆಗೂ ನಾಯಿಗಳು ಸಾವನಪ್ಪಿದೆ. ಗ್ರಾ ಪಂ ವ್ಯಾಪ್ತಿಯಲ್ಲಿ ಸಾವನಪ್ಪಿದ ನಾಯಿಗಳನ್ನು ದಫನ್ ಮಾಡಲು ಕ್ರಮ ಜರುಗಿಸುವೆ’ ಎಂದು ಪಿಡಿಓ ರವಿ ಪಟಗಾರ ಫೋನ್ ಮಾಡಿ ಪ್ರತಿಕ್ರಿಯಿಸಿದರು.