ಜೊಯಿಡಾ: ಗಣೇಶಗುಡಿಯ ಲಗುನಾ ರೆಸಾರ್ಟ’ಗೆ ನುಗ್ಗಿದ ದಾಂಡಿಗರು ಅಲ್ಲಿನ ಕಾರ್ಮಿಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಜೊತೆಗೆ ರೆಸಾರ್ಟ ದಾಖಲೆಗಳನ್ನು ಹರಿದು ಬಿಸಾಡಿದ್ದಾರೆ.
ಲಗುನಾ ರೆಸಾರ್ಟಿನಲ್ಲಿ ಬೋಟಿಂಗ್ ಗೈಡ್ ಆಗಿರುವ ಮುತ್ತಣ್ಣ ಅಂಗಡಿ ಜನವರಿ 6ರ ರಾತ್ರಿ ಇಳುವಾಗೆ ಹೋಗಿದ್ದರು. ಅವರು ಮರಳಿ ಬರುವಾಗ ಕಾರಿನಲ್ಲಿ ಬಂದ ಐದು ಜನ ರಾಜೇಶ ಐಕರ್ ಅವರ ಅಂಗಡಿ ಬಳಿ ಮುತ್ತಣ್ಣ ಅವರನ್ನು ಅಡ್ಡಗಟ್ಟಿದರು. ಆ ಪೈಕಿ ಮಹೇಶ ಪೂಜಾರ್ ಎಂಬಾತರು `ನಮ್ಮ ಬಗ್ಗೆ ಪಾರ್ಟನರ್ ಸಂತೋಷನ ಬಳಿ ಇಲ್ಲಸಲ್ಲದ ವಿಷಯ ಹೇಳಿ ಹಚ್ಚಿಕೊಡುತ್ತೀಯಾ?’ ಎಂದು ಪ್ರಶ್ನಿಸಿ ಮುತ್ತಣ್ಣರ ಮೇಲೆ ಕೈ ಮಾಡಿದರು.
ಆ ದಿನ ರಾತ್ರಿಯೂ ರೆಸಾರ್ಟ ಕಾರ್ಮಿಕ ಮುತ್ತಣ್ಣ ಅಂಗಡಿ ಹಾಗೂ ಅರ್ಬಾಜ ಶೇಖ್ ಗೆ ರಾತ್ರಿಯಿಡಿ ಫೋನ್ ಮಾಡಿ ಬೈದರು. ಮರುದಿನ ನಸುಕಿನ 2 ಗಂಟೆಗೆ ದಾಂಡೇಲಿಯಲ್ಲಿ ವಾಸವಾಗಿರುವ ಮಹೇಶ ಪೂಜಾರ್ ಜೊತೆ ಗ್ಲಾಡವಿನ್ ಜಳಕಿ ಧಾರವಾಡದ ವಿಟ್ಠಲ ಜೋನಿ ಹಾಗೂ ಇನ್ನೊಬ್ಬ ಅಪರಿಚಿತ ರೆಸಾರ್ಟಗೆ ನುಗ್ಗಿ ಗಲಾಟೆ ಮಾಡಿದರು. ರೆಸಾರ್ಟಿನಲ್ಲಿದ್ದ ದಾಖಲೆಗಳನ್ನು ಕಿತ್ತಾಡಿ ಅಲ್ಲಿಂದ ತೆರಳಿದರು.
ಈ ಬಗ್ಗೆ ರೆಸಾರ್ಟಿನ ಮ್ಯಾನೇಜರ್ ದನಂಜಯಕುಮಾರ ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.



