ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಮಂಜುನಾಥ ಭಟ್ಟ ಅವರು ನಿವೃತ್ತರಾಗಿ 22 ವರ್ಷ ಕಳೆದಿದೆ. ಇದೀಗ ಅವರಿಗೆ 80 ವರ್ಷ. ಆದರೂ, ಅವರು ಪಾಠ ಮಾಡುವುದನ್ನು ಬಿಟ್ಟಿಲ್ಲ.
ನಿತ್ಯ ಶಾಲೆಗೆ ತೆರಳಿ ಅವರು ಮಕ್ಕಳಿಗೆ ಪಾಠ ಹೇಳುತ್ತಾರೆ. ವಿವಿಧ ಆಟವನ್ನು ಆಡಿಸುತ್ತಾರೆ. ಕಥೆಯನ್ನು ಹೇಳುತ್ತಾರೆ. ಶಾಲೆಯಲ್ಲಿ ಕಾರ್ಯಕ್ರಮಗಳು ನಡೆದಾಗ ತಾವೇ ಸಿಹಿ ತಿಂಡಿ ಹಂಚುತ್ತಾರೆ. ಶಾಲಾ ವಾರ್ಷಿಕ ಉತ್ಸವಕ್ಕಾಗಿ ಮಕ್ಕಳಿಗೆ ನಾಟಕಗಳನ್ನು ಕಲಿಸುತ್ತಾರೆ. ಜೊತೆಗೆ ತಮ್ಮ ಜೀವನ ಅನುಭವ ಹಾಗೂ ಗಾದೆ ಮಾತುಗಳನ್ನು ಅರ್ಥಸಹಿತ ವಿವರಿಸುವ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ.
ಕಲ್ಲೆಮಕ್ಕಿ ಗ್ರಾಮದ ಸುತ್ತಲು ಜನ ಬಿಳಿ ಬಟ್ಟೆ ಧರಿಸಿ ಓಡಾಡುವ ಇವರನ್ನು ಕಂಡರೆ ಜನ ತಲೆಭಾಗಿ ನಮಸ್ಕರಿಸುತ್ತಾರೆ. ಇಡೀ ಊರಿನಲ್ಲಿ `ಗುರುಜಿ’ ಎಂದೇ ಕರೆಯಿಸಿಕೊಳ್ಳುವ ಇವರು ತಮ್ಮ ಸೇವೆಗೆ ಕಿಂಚಿತ್ತು ಹಣ ಪಡೆಯುತ್ತಿಲ್ಲ. ಯಾರಾದರೂ ಹಣ ನೀಡಲು ಬಂದರೂ ಅದನ್ನು ಶಾಲಾ ಮಕ್ಕಳ ವಿದ್ಯಾಬ್ಯಾಸಕ್ಕೆ ಬಳಸುವಂತೆ ಮನವಿ ಮಾಡುತ್ತಾರೆ. ಅವರು ಸುತ್ತಮುತ್ತಲ ಮಕ್ಕಳ ಪಾಲಿಗೆ ಆರಾಧ್ಯದೇವ. ಯಾವ ಮಕ್ಕಳಿಗೆ ಯಾವ ವಿಷಯದಲ್ಲಿ ಅನುಮಾನಗಳಿದ್ದರೂ ಇವರ ಬಳಿ ಬಂದು ಬಗೆಹರಿಸಿಕೊಳ್ಳುತ್ತಾರೆ. ಇವರಿಗೂ ಮಕ್ಕಳ ಕಂಡರೇ ಅಷ್ಟೇ ಅಚ್ಚುಮೆಚ್ಚು. ತಮಗೆ ಬರುವ ಪಿಂಚಣಿ ಹಣವನ್ನು ಸಹ ಅವರು ಮಕ್ಕಳ ವಿದ್ಯಾಬ್ಯಾಸಕ್ಕೆ ಬಳಸಿದ ಉದಾಹರಣೆಗಳಿವೆ.
ಶಿಕ್ಷಕನಾಗಬೇಕು ಎಂದು ಬಾಲ್ಯದಲ್ಲಿಯೇ ಕನಸು ಕಂಡಿದ್ದ ಅವರು 1961ರಲ್ಲಿ ನೆಚ್ಚಿನ ವೃತ್ತಿಯನ್ನು ಸೇರಿದರು. ನಾಡಿನ ಹಲವು ಶಾಲೆಗಳನ್ನು ಸುತ್ತಿ, ಅಲ್ಲಿನ ಮಕ್ಕಳಿಗೆಲ್ಲ ಪಾಠ ಮಾಡಿದರು. ಹೋಗಿ ಬಂದ ಕಡೆಗಳೆಲ್ಲವೂ ತಮ್ಮದೇ ಆದ ಗೌರವವನ್ನು ಅವರು ಕಾಪಾಡಿಕೊಂಡಿದ್ದಾರೆ. ಅವರು ಪಾಠ ಮಾಡಿದ ಊರಿನಲ್ಲಿರುವ ಮದ್ಯ ವಯಸ್ಕರು ಇಂದಗೂ ತಮ್ಮ ಗುರುಗಳನ್ನು ನೆನೆಯುತ್ತಾರೆ. ಕೊನೆಯದಾಗಿ 2002ರ ಸೆಪ್ಟೆಂಬರ್’ನಲ್ಲಿ ಸಿದ್ದಾಪುರದ ಬಿಳಿಗೋಡ ಶಾಲೆಯಲ್ಲಿ ಅವರು ನಿವೃತ್ತರಾದರು. ಆದರೂ ವೃತ್ತಿ ಮುಂದುವರೆಸಿದರು!
`ಮಕ್ಕಳ ಕಲಿಕೆಗಿಂತ ದೊಡ್ಡ ಸನ್ಮಾನ ನನಗೆ ಬೇರೆ ಇಲ್ಲ. ಅವರ ಸಾಧನೆಯಲ್ಲಿ ನಾನು ಖುಷಿ ಕಂಡಿದ್ದೇನೆ’ ಎನ್ನುವ ಅವರು ಕಾಲಿಗೆ ಚಪ್ಪಲಿ ಧರಿಸಲ್ಲ. ಓಡಾಡಲು ವಾಹನಗಳನ್ನು ಸಹ ಬಳಸಲ್ಲ.
– ಅಚ್ಯುತಕುಮಾರ ಯಲ್ಲಾಪುರ
Discussion about this post