ಪ್ರತಿ ವರ್ಷ ಮಳೆಗಾಲ ಶುರುವಾದಾಗ ಜಿಲ್ಲೆಯ ಅನೇಕ ಕಡೆಗಳಿಂದ ನೆರೆ ರಾಜ್ಯ ಗೋವಾಗೆ ಕಪ್ಪೆಗಳ ಅಕ್ರಮ ಸಾಗಾಟ ನಡೆಯುತ್ತದೆ. ಹೀಗೆ ಕಪ್ಪೆ ಹಿಡಿದು ಸಾಗಿಸುವಾಗ ಸಿಕ್ಕಿಬಿದ್ದವರಿಗೆ ಮೂರು ವರ್ಷ ಜೈಲು ಹಾಗೂ 25 ಸಾವಿರ ದಂಡ ವಿಧಿಸಲು ಅರಣ್ಯಾಧಿಕಾರಿಗಳಿಗೆ ಅವಕಾಶವಿದೆ.
ಹೀಗಾಗಿ ನಾನಾ ಭಾಗದ ಜನ `ಕಪ್ಪೆ ಬೋಜನ’ಕ್ಕಾಗಿ ಗೋವಾಗೆ ಬರುತ್ತಾರೆ. ಕಪ್ಪೆಗಳ ಅಕ್ರಮ ಸಾಗಾಟದಿಂದಾಗಿ ಭಾರತೀಯ ಬುಲ್‌ಫ್ರಾಗ್ ಮತ್ತು ಜೆರ್ಡನ್ಸ್ ಬುಲ್‌ಫ್ರಾಗ್ ಜಾತಿಯ ಕಪ್ಪೆಗಳು ಅಳಿವಿನ ಅಂಚಿನಲ್ಲಿದ್ದು, ಈ ವರ್ಷವೂ ಒಂದು ದಿನ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳಿಗೆ ಒಂದಷ್ಟು ಅಮಾಯಕ ಕಪ್ಪೆಗಳನ್ನು ಬದುಕಿಸಿದ ಪುಣ್ಯ ದೊರೆಯುತ್ತದೆ.
ಇಲ್ಲಿನ ಮಲೆನಾಡು ಹಾಗೂ ಕರಾವಳಿಯಲ್ಲಿನ ಮಂಡೂಕಗಳನ್ನು ಹಳ್ಳಿಯ ಜನ ಹಿಡಿದು ಗೋವಾಗೆ ಸಾಗಿಸುತ್ತಾರೆ. ಸಾಮಾನ್ಯವಾಗಿ ಬಸ್, ಟೆಂಪೋಗಳಲ್ಲಿ ಇದರ ಸಾಗಾಟ ನಡೆಯುತ್ತದೆ. ಸಾವನಪ್ಪಿದ ಕಪ್ಪೆಗಳಿಗೆ ಯಾರೂ ಅಲ್ಲಿ ಕಾಸು ಕೊಡುವುದಿಲ್ಲ. ಹೀಗಾಗಿ ಜೀವಂತ ಕಪ್ಪೆಗಳನ್ನೇ ಸಾಗಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಬರುವ ಕಾರಣ ಗಾಂಜಾ, ಅಫೀಮು ಜೊತೆ ಕಪ್ಪೆಗಳ ಖಾದ್ಯ ಅಲ್ಲಿ ಮಾರಾಟವಾಗುತ್ತದೆ. ಚೀನಾ ಹಾಗೂ ರಷ್ಯಾದ ಜನ ಜೀವಂತ ಕಪ್ಪೆಗಳಿಗೆ ಹಿಂಸೆ ನೀಡುವುದನ್ನು ಕಣ್ಣಾರೆ ನೋಡಿ, ನಂತರ ಅವುಗಳ ಖಾದ್ಯ ಸವಿಯಲು ಹೋಟೆಲ್ ಮಾಲಕರಿಗೆ ಎಷ್ಟು ಬೇಕಾದರೂ ಹಣ ಕೊಡುತ್ತಾರೆ.
ಸಾಮಾನ್ಯವಾಗಿ ಬುಲ್ ಫ್ರಾಗ್ ಎಂಬ ಪ್ರಬೇಧದ ದೊಡ್ಡ ಗಾತ್ರದ ಕಪ್ಪೆಗಳನ್ನು ಮಾಂಸ ಭಕ್ಷಣೆಗಾಗಿ ಉಪಯೋಗಿಸುತ್ತಾರೆ. ಈ ಕಪ್ಪೆಯು ಹೆಚ್ಚಾಗಿ ಕರಾವಳಿ ಭಾಗದ ಕಾರವಾರ, ಅಂಕೋಲಾ, ಹೊನ್ನಾವರ ಹಾಗೂ ಮಲೆನಾಡು ಭಾಗದ ಜೋಗಗಳಲ್ಲಿ ಇವೆ. ಜೂನ್ ತಿಂಗಳ ಮೊದಲ ಮಳೆಹನಿಗೆ ಹೊಲಗದ್ದೆಯತ್ತ ಮುಖಮಾಡುವ ಈ ಕಪ್ಪೆಗಳು ಗಾತ್ರದಲ್ಲಿ ಬಲು ದೊಡ್ಡದಿರುತ್ತವೆ. ಇವು ಸುಮಾರು ನಾಲ್ಕು ವರ್ಷ ಬದುಕುತ್ತದೆ. ಜೂನ್ ತಿಂಗಳಲ್ಲಿ ಗಂಡು ಕಪ್ಪೆಯು ಹಳದಿ ಬಣ್ಣಕ್ಕೆ ತನ್ನ ದೇಹವನ್ನು ಪರಿವರ್ತಿಸಿಕೊಂಡು ಹೆಣ್ಣಿನೊಂದಿಗೆ ಮಿಲನ ಹೊಂದಿ ಸಂತಾನಾಭಿವೃದ್ಧಿ ಮಾಡುತ್ತವೆ.
ಈ ಸಮಯದಲ್ಲಿಯೇ ಈ ಕಪ್ಪೆಗಳನ್ನು ಅಕ್ರಮ ದಂಧೆಕೋರರು ಜೀವಂತ ಹಿಡಿದು ಬೇಡಿಕೆ ಇರುವ ಗೋವಾದ ಹೋಟಲ್’ಗಳಿಗೆ ಕಾಡಿನ ದಾರಿ ಮೂಲಕವೂ ಸಾಗಿಸುತ್ತಾರೆ. ಇನ್ನೂ ಅಕ್ರಮ ದಂದೆ ಕೋರರಿಗೆ ಕಪ್ಪೆಗಳ ಗಾತ್ರಕ್ಕೆ ಅನುಗುಣವಾಗಿ ಬೆಲೆ ಸಿಗುತ್ತದೆ. ಜೀವಂತವಾಗಿಯೇ ತರುವ ಈ ಕಪ್ಪೆಗಳ ಹೆಚ್ಚು ಮಾಂಸವಿರುವ ಹಿಂಭಾಗದ ಕಾಲುಗಳನ್ನು ಮಾತ್ರ ತುಂಡರಿಸಿ ತೂಕ ಹಾಕಲಾಗುತ್ತದೆ. ಒಂದು ಕೆಜಿ ಮಾಂಸಕ್ಕಾಗಿ ಕನಿಷ್ಟ 200 ಕಪ್ಪೆಗಳ ಬಲಿ ಖಚಿತ.
ಇನ್ನೂ ಗೋವಾದಲ್ಲಿ ಬುಲ್ ಫ್ರಾಗ್ ಕಪ್ಪೆಗಳ ಹಿಂಭಾಗದ ಕಾಲುಗಳನ್ನು ಮಾತ್ರ ಸೂಪ್ ಹಾಗೂ ಫ್ರೈ ಮಾಡಲು ಬಳಸುತ್ತಾರೆ. ಹೀಗಾಗಿ ಜೀವಂತವಿರುವ ಕಪ್ಪೆಯ ಕಾಲನ್ನು ಮಾತ್ರ ಬಳಸಲಾಗುವುದರಿಂದ ಇಲ್ಲಿ ಸತ್ತ ಕಪ್ಪೆಗೆ ಬೆಲೆ ಇರುವುದಿಲ್ಲ. ಗೋವಾಕ್ಕೆ ಬರುವ ವಿದೇಶಿಯರಿಗೆ ಈ ಕಪ್ಪೆಗಳ ಖಾದ್ಯ `ಜಂಪಿAಗ್ ಚಿಕನ್ ಡಿಶ್’ ಎಂದೇ ಪ್ರಸಿದ್ಧವಾಗಿದೆ. ಐಷಾರಾಮಿ ಹೋಟೆಲ್‌ಗಳಲ್ಲಿ, ಕೆಲವು ಡೇರಾಗಳಲ್ಲಿ ಮಾತ್ರ ಇವು ಸಿಗುತ್ತವೆ. ಅದನ್ನು ಸೇವಿಸುವಾಗ ಸಿಕ್ಕಿಬಿದ್ದರೆ ಅದಕ್ಕೂ ಶಿಕ್ಷೆ ಖಚಿತ.
Discussion about this post