ಕುಡಿಯುವ ನೀರಿಗಾಗಿ ಹಿತ್ಲಕಾರಗದ್ದೆ ಬಳಿಯ ದಾತ್ರಿ ಲೇಔಟಿನ ಮಂಜುನಾಥ ಹೆಗಡೆ ಪ್ರತಿಭಟನೆ ನಡೆಸಿದಾಗ `ಒಂದು ವಾರದ ಒಳಗೆ ನೀರು ಪೂರೈಸುವೆ’ ಎಂದು ವಾಗ್ದಾನ ಮಾಡಿದ್ದ ಅಧಿಕಾರಿಗಳು ತಮ್ಮ ಮಾತು ಉಳಿಸಿಕೊಂಡಿಲ್ಲ. ಈ ಹಿನ್ನಲೆ ಮಂಜುನಾಥ ಹೆಗಡೆ ಅವರು ಮತ್ತೊಮ್ಮೆ ಪ್ರತಿಭಟನೆಗೆ ಸಜ್ಜಾಗಿದ್ದಾರೆ!
`ದಾಖಲೆಗಳಲ್ಲಿ ಮಾತ್ರ ಮೂಲಭೂತ ಸೌಕರ್ಯ ಒದಗಿಸಿ ಸರ್ಕಾರಿ ಸ್ವಾಧೀನಕ್ಕೆ ಒಳಪಟ್ಟ ಲೇಔಟ್’ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಈ ಬಗ್ಗೆ ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ಅರಿವಿದ್ದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ’ ಎಂದು ಮಂಜುನಾಥ ಹೆಗಡೆ ದೂರಿದ್ದಾರೆ. `ಖಾಸಗಿ ವ್ಯಕ್ತಿ ಅಭಿವೃದ್ಧಿಪಡಿಸಿದ ವಸತಿ ನಿವೇಶನದಲ್ಲಿ ಎಲ್ಲಾ ಸೌಕರ್ಯ ಒದಗಿಸಿದ ನಂತರವೇ ಅದನ್ನು ದೃಢೀಕರಿಸಿ ಸ್ಥಳೀಯ ಸಂಸ್ಥೆ ಆ ವಸತಿ ನಿವೇಶನಗಳ ಹಕ್ಕು ಹಸ್ತಾಂತರಿಸಿಕೊಳ್ಳಬೇಕು. ಆದರೆ, ಹಿತ್ಲಕಾರಗದ್ದೆಯ ದಾತ್ರಿ ನಗರದಲ್ಲಿ ಸರ್ಕಾರಿ ಸೂಚನೆಗಳಲ್ಲಿರುವ ಕನಿಷ್ಟ ಸೌಕರ್ಯಗಳನ್ನು ಒದಗಿಸಿಲ್ಲ. ಇದರಿಂದ ಅಲ್ಲಿ ನಿವೇಶನ ಪಡೆದ ತಮಗೆ ಅನ್ಯಾವಗಾಗಿದೆ’ ಎಂದವರು ಹೇಳಿದ್ದಾರೆ.
`ಈ ಹಿಂದೆ ಪ್ರತಿಭಟನೆ ನಡೆಸಿದಾಗ ಒಂದು ವಾರದ ಒಳಗೆ ನೀರಿನ ಸಮಸ್ಯೆ ಬಗೆಹರಿಸಿಕೊಡುವುದಾಗಿ ಪ ಪಂ ಮುಖ್ಯಾಧಿಕಾರಿ ಸುನಿಲ ಗಾವಡೆ ಭರವಸೆ ನೀಡಿದ್ದರು. ಆದರೆ, ಈವರೆಗೂ ಭರವಸೆ ಈಡೇರಿಲ್ಲ. ಈ ಹಿನ್ನಲೆ ಜನವರಿ 23ರಂದು ಮತ್ತೆ ಧರಣಿ ನಡೆಸುವೆ’ ಎಂದು
ಅವರು ಯಲ್ಲಾಪುರ ಪಟ್ಟಣ ಪಂಚಾಯತಗೂ ಪತ್ರ ಬರೆದಿದ್ದಾರೆ.