ಗೋವಾದಿಂದ ಕರ್ನಾಟಕಕ್ಕೆ ಮದ್ಯ ಸಾಗಾಣಿಕೆ ಮಾಡಿದರೆ ಕಾನೂನು ಕ್ರಮವಾಗುತ್ತದೆ ಎಂದು ಅರಿತ ವಿದ್ಯಾರ್ಥಿಗಳು ಮಾಜಾಳಿ ಗಡಿದಾಟಿದ ನಂತರ ದುಪ್ಪಟ್ಟು ಬೆಲೆ ನೀಡಿ ಅಗ್ಗದ ಗೋವಾ ಮದ್ಯ ಖರೀದಿಸಿದ್ದರು. ಆದರೂ ಅಬಕಾರಿ ಅಧಿಕಾರಿಗಳು ಅವರ ವಿರುದ್ಧ ಕ್ರಮ ಜರುಗಿಸಿದರು!
ಚಿಕ್ಕಮಂಗಳೂರಿನ ವಿದ್ಯಾರ್ಥಿಗಳು ಮೊನ್ನೆ ಗೋವಾ ಪ್ರವಾಸಕ್ಕೆ ಹೋಗಿದ್ದರು. ಗೋವಾದಿಂದ ಮರಳುವಾಗ ಅಲ್ಲಿನ ಮದ್ಯ ತರುವ ಬಗ್ಗೆ ಮಾತನಾಡಿಕೊಂಡರು. ಆದರೆ, ವಾಹನ ಚಾಲಕ ಅದಕ್ಕೆ ಅನುಮತಿ ನೀಡಲಿಲ್ಲ. ಮಾಜಾಳಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ಸಿಬ್ಬಂದಿ ಹಾಗೂ ಪೊಲೀಸರು ವಾಹನ ತಪಾಸಣೆ ನಡೆಸುವ ಬಗ್ಗೆ ಚಾಲಕ ಎಚ್ಚರಿಸಿದ್ದರು. ಹೀಗಾಗಿ ಗೋವಾದಿಂದ ಮದ್ಯ ತರಲು ಆ ವಿದ್ಯಾರ್ಥಿಗಳು ಮನಸ್ಸು ಮಾಡಿರಲಿಲ್ಲ.
ಮಾಜಾಳಿ ತಪಾಸಣಾ ಕೇಂದ್ರದಲ್ಲಿ ಅಬಕಾರಿ ಸಿಬ್ಬಂದಿ ವಾಹನ ತಪಾಸಣೆ ನಡೆಸಿದರೂ ಏನು ಸಿಗಲಿಲ್ಲ. ತಪಾಸಣಾ ಕೇಂದ್ರದಿoದ ಕೊಂಚ ಮುಂದೆ ವ್ಯಕ್ತಿಯೊಬ್ಬರು ಗೋವಾ ಮದ್ಯವನ್ನು ಮಾರಾಟ ಮಾಡುವ ಬಗ್ಗೆ ಆ ವಾಹನದಲ್ಲಿದ್ದ ವಿದ್ಯಾರ್ಥಿಯೊಬ್ಬರಿಗೆ ಗೊತ್ತಿತ್ತು. ಹೀಗಾಗಿ ಎಲ್ಲರ ಒತ್ತಾಯದ ಮೇರೆಗೆ ಚಾಲಕನೂ ವಾಹನವನ್ನು ಆ ಕಡೆ ತಿರುಗಿಸಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ತಮಗಿಷ್ಟವಾದಷ್ಟು ಮದ್ಯ ಖರೀದಿಸಿದರು. ಇದಕ್ಕಾಗಿ ಗೋವಾಗಿಂತಲೂ ದುಪ್ಪಟ್ಟು ಹಣ ಪಾವತಿಸಿದರು.
ಮದ್ಯದ ಜೊತೆ ವಿದ್ಯಾರ್ಥಿಗಳನ್ನು ಹೊತ್ತ ವಾಹನ ಕಾರವಾರದ ಕಡೆ ಮುಖ ಮಾಡಿತು. ಆದರೆ, ಅಲ್ಲಿ ಅಬಕಾರಿ ಸಿಬ್ಬಂದಿ ಮತ್ತೆ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದ್ದರು. ರಾಜ್ಯದ ತೆರಿಗೆ ತಪ್ಪಿಸಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನ ತಪಾಸಣೆ ನಡೆಸಿ ಕ್ರಮ ಜರುಗಿಸಿದರು. ಕಾನೂನುಬಾಹಿರವಾಗಿ ಕರ್ನಾಟಕ ಗಡಿಯಲ್ಲಿ ಮದ್ಯ ಮಾರಾಟ ಮಾಡಿದವನ ವಿರುದ್ಧ ಅಬಕಾರಿ ಸಿಬ್ಬಂದಿ ಕ್ರಮ ಜರುಗಿಸಲಿಲ್ಲ. ಕಾರಣ, ವಿದ್ಯಾರ್ಥಿಗಳು ಭಾರೀ ಪ್ರಮಾಣದಲ್ಲಿ ಮದ್ಯ ಸಾಗಿಸುತ್ತಿರುವ ಬಗ್ಗೆ ಅಕ್ರಮ ಮದ್ಯ ಮಾರಾಟಗಾರನೇ ಅಬಕಾರಿ ಇಲಾಖೆಗೆ ಮಾಹಿತಿ ನೀಡಿದ್ದರು!