50 ವರ್ಷದ ಹಿಂದೆ ತಮ್ಮ ವಿದ್ಯಾರ್ಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಧ್ಯಾಹ್ನ ಊಟ ಹಾಕಿದವರನ್ನು ಹುಡುಕಿಕೊಂಡು ಬಂದ ಸೈನಿಕ ಜಾನ್ ದಡೆದವರ್ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಿದ್ದಾರೆ.
1971ರಲ್ಲಿ ಜಾನ್ ದಡೆದವರ್ ಅವರ ಕುಟುಂಬ ಯಲ್ಲಾಪುರದಲ್ಲಿ ವಾಸವಾಗಿತ್ತು. ಆ ಕಾಲದಿಂದಲೂ ಸವಣಗೇರಿ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆಯಿದ್ದು, ಜಾನ್ ಅವರನ್ನು ಪಾಲಕರು ಸವಣಗೇರಿ ಶಾಲೆಗೆ ಸೇರಿಸಿದ್ದರು. ಆದರೆ, ಜಾನ್ ಅವರಿಗೆ ಮಧ್ಯಾಹ್ನ ಊಟದ ಸಮಸ್ಯೆ ಎದುರಾಗಿತ್ತು. ಆಗ, ಪರಮೇಶ್ವರ ಹೆಗಡೆ ಕೊಂಕಣಕೊಪ್ಪ, ಕೃಷ್ಣ ಹೆಗಡೆ ಕೊಂಕಣಕೊಪ್ಪ, ಗೋಪಾಲ ಭಟ್ಟ ಬೆಳಸೂರು ಅವರು ಜಾನ್ ಅವರಿಗೆ ಮಧ್ಯಾಹ್ನ ಊಟ ಹಾಕುವ ಹೊಣೆ ಹೊತ್ತರು. ತಾವು ಬಡತನದಲ್ಲಿದ್ದರೂ ಆ ಮೂವರು ಜಾನ್ ಅವರ ವಿದ್ಯಾಬ್ಯಾಸಕ್ಕೆ ಅಡಚಣೆ ಆಗದಂತೆ ನಿತ್ಯವೂ ಅವರಿಗೆ ಊಟ ಬಡಿಸಿದರು.
ಇದರ ಪರಿಣಾಮವಾಗಿ ಜಾನ್ ಅವರು ವಿದ್ಯೆ ಕಲಿತರು. ಮುಂದೆ ಸೈನಿಕ ವೃತ್ತಿ ಆರಿಸಿಕೊಂಡರು. ಅರಣ್ಯ ಇಲಾಖೆಯಲ್ಲಿ ಸಹ ಸೇವೆ ಸಲ್ಲಿಸಿದರು. ಇದೀಗ ಶಿಕ್ಷಕ ರಾಮಾ ನಾಯ್ಕ ಹಾಗೂ ಅನ್ನ ಹಾಕಿದವರನ್ನು ನೆನೆದು ಸವಣಗೇರಿ ಶಾಲೆಗೆ ಬಂದರು. ಶಿಕ್ಷಕ ರಾಮಾ ನಾಯ್ಕ ಅವರ ಭಾವಚಿತ್ರಕ್ಕೆ ನುಡಿನಮನ ಸಲ್ಲಿಸಿದರು. ಊಟ ಹಾಕಿದ ಮೂವರು ದಾನಿಗಳಿಗೆ ಪೇರಲೆ ಗಿಡ ಉಡುಗರೆಯಾಗಿ ನೀಡಿ, ಗೌರವಿಸಿದರು.
ಗಣಪತಿ ಗಲ್ಲಿ ಶಾಲೆಯ ಮುಖ್ಯಾಧ್ಯಾಪಕ ಆರ್ ಐ ನಾಯ್ಕ ಈ ವೇಳೆ ಮಕ್ಕಳಿಗೆ ಬಿಸಿಊಟದ ತಟ್ಟೆ ವಿತರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಭಟ್ಟ, ಗ್ರಾ ಪಂ ಅಧ್ಯಕ್ಷೆ ಶಿಲ್ಪಾ ನಾಯ್ಕ, ಸದಸ್ಯ ಸುಬ್ಬಣ್ಣ ಉದ್ದಾಬೈಲ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ, ಟಿಎಸ್‌ಎಸ್ ನಿರ್ದೇಶಕ ಕೃಷ್ಣ ಹೆಗಡೆ ಜೂಜಿನಬೈಲ್, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶ್ರೀಪಾದ ಹೆಗಡೆ ಈ ಕ್ಷಣಗಳಿಗೆ ಸಾಕ್ಷಿಯಾದರು. ಅದಾದ ನಂತರ ಎಲ್ಲರೂ ಸೇರಿ ಕೇಸರಿಬಾತಿನ ಊಟ ಸವಿದರು.