ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಬಮೇಳಕ್ಕೆ ತೆರಳಿ ಪವಿತ್ರ ಗಂಗಾ ನದಿ ಸ್ನಾನ ಮಾಡಬೇಕು ಎಂದುಕೊoಡಿದ್ದ ಶಿರಸಿ ಗಣೇಶ ನಗರದ ಗೌರಿ ನಾಯ್ಕ ಅವರಿಗೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಗಂಗೆಯನ್ನು ಪೂಜಿಸಿ ಅವರು ಮನೆ ಆವರಣದಲ್ಲಿ ಬಾವಿ ತೋಡಿದ್ದು, ಎರಡುವರೆ ತಿಂಗಳ ಒಂಟಿ ಜೀವದ ಶ್ರಮಕ್ಕೆ ಈ ದಿನ ಗಂಗೆ ಒಲೆದಿದ್ದಾಳೆ.
ಕಳೆದ ವರ್ಷ ಅಂಗನವಾಡಿ ಮಕ್ಕಳಿಗೆ ಕುಡಿಯುವ ನೀರು ಇಲ್ಲದಿರುವುದನ್ನು ಅರಿತು ಅಲ್ಲಿಯೂ ಬಾವಿ ತೆಗೆದಿದ್ದರು. ಈ ವಿಷಯದಿಂದ ಸರ್ಕಾರ ಮುಜುಗರಕ್ಕೆ ಒಳಗಾಗಿ ಬಾವಿ ಮುಚ್ಚಿಸುವ ಪ್ರಯತ್ನವನ್ನು ಮಾಡಿತ್ತು. ಕೊನೆಗೆ ಆ ಹೋರಾಟದಲ್ಲಿ ಗೌರಿ ನಾಯ್ಕರು ಗೆಲುವು ಸಾಧಿಸಿ ಅಂಗನವಾಡಿ ಮಕ್ಕಳ ದಾಹ ನೀಗಿಸಿದ್ದರು. ಗೌರಿ ನಾಯ್ಕ ಏಳು ವರ್ಷ ಹಿಂದೆ ಮನೆ ಹಿಂಬದಿಯಲ್ಲಿ 65 ಅಡಿ ಆಳದ ಬಾವಿ ತೋಡಿದ್ದರು. ನಂತರ ನಾಲ್ಕು ವರ್ಷ ಹಿಂದೆ 45 ಅಡಿ ಅಳದ ಬಾವಿ ತೋಡಿದ್ದರು.
ಸದ್ಯ ಕುಂಬಮೇಳದ ಹಿನ್ನಲೆ ಅವರು ಬಾವಿ ತೆಗೆದಿದ್ದಾರೆ. ಮೂರು ತಂಬಿಗೆ, ಗುದ್ದಲಿ-ಪಿಕಾಸು ಹಿಡಿದು ಎರಡುವರೆ ತಿಂಗಳ ಕಾಲ ಮಣ್ಣು ಅಗೆದು ಅವರು ಬಾವಿ ತೋಡುತ್ತಾರೆ. ಬೆಳಗ್ಗೆ 8ಗಂಟೆಯಿoದ ಸಂಜೆ 7 ಗಂಟೆಯವರೆಗೂ ಅವರು ಬಾವಿಗಾಗಿ ದುಡಿಯುತ್ತಿದ್ದಾರೆ. ಡಿಸೆಂಬರಿನಲ್ಲಿ ಅವರು ಈ ಕೆಲಸ ಶುರು ಮಾಡಿದ್ದು, ಇದೀಗ ನೀರು ಕಂಡು ಸಮಾಧಾನವಾಗಿದ್ದಾರೆ.
56 ವರ್ಷ ವಯಸ್ಸಿನ ಗೌರಿ ನಾಯ್ಕ ಅವರು ಒಂಟಿಯಾಗಿ ಭೂಮಿ ಅಗೆಯುತ್ತಾರೆ. ಅಲ್ಲಿದ್ದ ಮಣ್ಣನ್ನು ಹೊತ್ತು ಅನತಿ ದೂರ ಸಾಗಿಸುತ್ತಾರೆ. ಬಾವಿ ಮದ್ಯ ಬಂದ ಬೆಳಿಗಲ್ಲನ್ನು ಸಹ ಕಷ್ಟಪಟ್ಟು ತೆಗೆದಿದ್ದಾರೆ. ಸದ್ಯ 30 ಅಡಿ ಆಳದಲ್ಲಿ ಅವರಿಗೆ ನೀರು ಸಿಕ್ಕಿದೆ.