ಉತ್ತರ ಕನ್ನಡ ಜಿಲ್ಲೆಯಲ್ಲಿ ವನ್ಯಜೀವಿಗಳ ಕಾಟ ವಿಪರೀತವಾಗಿದೆ. ಅಡಿಕೆ, ಬಾಳೆ, ತೆಂಗು ಸೇರಿ ಇಲ್ಲಿನ ವಾಣಿಜ್ಯ ಬೆಳೆಗಳ ಜೊತೆ ಆಹಾರ ಬೆಳೆಗಳನ್ನು ಅವು ನಾಶ ಮಾಡುತ್ತಿವೆ. ಸಿದ್ದಾಪುರದ ಹರಗಿಯಲ್ಲಿ ಹಂದಿ ದಾಳಿ ನಡೆಸಿದ್ದು, ಪೂರ್ತಿ ಅಡಿಕೆ ತೋಟವನ್ನು ಧ್ವಂಸ ಮಾಡಿದೆ.
ಹರಗಿಯ ಶಾರದಾ ನಾಯ್ಕ ಅವರು ಎರಡು ವರ್ಷದ ಹಿಂದೆ ತೋಟ ನಿರ್ಮಿಸಿದ್ದರು. ಅಲ್ಲಿನ ಅಡಿಕೆ ಗಿಡಗಳನ್ನು ಮಕ್ಕಳಂತೆ ಕಾಪಾಡಿಕೊಂಡಿದ್ದರು. ಆದರೆ, ರಾತ್ರಿ ವೇಳೆ ದಿಢೀರ್ ದಾಳಿ ನಡೆಸಿದ ಹಂದಿಗಳ ಗುಂಪು 145ಕ್ಕೂ ಅಧಿಕ ಅಡಿಕೆ ಬುಡಗಳನ್ನು ಕಿತ್ತು ಹಾಕಿದೆ. ಇನ್ನಷ್ಟು ಅಡಿಕೆ ಮರಗಳನ್ನು ಮುರಿದಿದೆ.
ಕಾಡು ಹಂದಿ ಉಪಟಳದ ಬಗ್ಗೆ ಶಾರದಾ ನಾಯ್ಕ ಅವರು ಅರಣ್ಯ ಇಲಾಖೆಗೆ ಮುಂಚಿತವಾಗಿ ಮಾಹಿತಿ ನೀಡಿದ್ದರು. ಪ್ರಾಣಿಗಳ ಉಪಟಳ ತಪ್ಪಿಸಿ ಎಂದು ಮನವಿ ಮಾಡಿದ್ದರು. ಆದರೆ, ಅರಣ್ಯ ಇಲಾಖೆ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಅವು ನೆಟ್ಟಿದ್ದ ಅಡಿಕೆ ತೋಟ ಸಂಪೂರ್ಣವಾಗಿ ನೆಲ ಕಚ್ಚಿದೆ.
ಅಡಿಕೆ ಗಿಡ ಉಳಿಸಿಕೊಳ್ಳಲು ಶಾರದಾ ನಾಯ್ಕ ಅವರು ಸಾಕಷ್ಟು ಮುನ್ನಚ್ಚರಿಕೆವಹಿಸಿದ್ದರೂ ಅದನ್ನು ಉಳಸಿಕೊಳ್ಳಲು ಸಾಧ್ಯವಾಗಲಿಲ್ಲ. ವನ್ಯಜೀವಿ ದಾಳಿ ನಂತರ ಅರಣ್ಯ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇಟಗಿ, ಬಿಳಗಿ, ಹಾರ್ಸಿಕಟ್ಟಾ, ಕ್ಯಾದಗಿ, ದೊಡ್ಮನೆ, ಭಾಗದಲ್ಲಿ ಸಹ ಕಾಡು ಪ್ರಾಣಿಗಳ ಕಾಟ ಜೋರಾಗಿದೆ. ಕಾಡು ಎಮ್ಮೆ, ಮಂಗ ಹಾಗೂ ಹಂದಿ ಕಾಟಕ್ಕೆ ಅಲ್ಲಿನ ಜನ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.




