`ನನಗೂ ಕುಟುಂಬವಿದೆ. ಸಣ್ಣ ಮಕ್ಕಳು ಮನೆಯಲ್ಲಿದ್ದಾರೆ. ವಯಸ್ಸಾದ ತಂದೆ-ತಾಯಿಯಿದ್ದಾರೆ. ಹೀಗಿರುವಾಗ ಆಸ್ಪತ್ರೆ ವಿಷಯವಾಗಿ ಹೋರಾಟ ಮಾಡಿದರೆ ವಕೀಲರ ಆಫೀಸು, ಪೊಲೀಸ್ ಸ್ಟೇಶನ್ನು ಹಾಗೂ ಕೋರ್ಟು-ಕಚೇರಿ ಅಲೆದಾಡುವ ಹಾಗೇ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮಾಧ್ಯಮದವರ ಮುಂದೆ ನೋವು ತೋಡಿಕೊಂಡಿದ್ದಾರೆ.
`ಪ್ರಶ್ನೆ ಮಾಡಿದವರ ವಿರುದ್ಧ ಶಾಸಕರು ಪ್ರತಿಭಟನೆ ಮಾಡಿಸುತ್ತಾರೆ. ಪ್ರತಿಕೃತಿದಹಿಸಿ ಅವಮಾನ ಮಾಡಿಸುತ್ತಾರೆ. ಅನಗತ್ಯ ನೋಟಿಸ್ ನೀಡಿ ಕೋರ್ಟು-ಕಚೇರಿ ಅಲೆದಾಡಿಸುವಂತೆ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಸಂಬದ್ಧ ಕಮೆಂಟ್ ಮಾಡಿಸುತ್ತಾರೆ’ ಎಂದು ಅನಂತಮೂರ್ತಿ ಹೆಗಡೆ ಅಳಲು ತೋಡಿಕೊಂಡಿದ್ದಾರೆ.
`ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆ ವಿಚಾರವಾಗಿ ಸರ್ಕಾರ ವೈದ್ಯಕೀಯ ಸಲಕರಣೆಗಳಿಗೆ ಸರ್ಕಾರ 30 ಕೋಟಿ ರೂಪಾಯಿ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಹೈಟೆಕ್ ಅಸ್ಪತ್ರೆಯನ್ನ ಕೆಳದರ್ಜೆಗೆ ತಳ್ಳುವ ಪ್ರಯತ್ನ ನಡೆದಿದೆ’ ಎಂದು ಅನಂತಮೂರ್ತಿ ಹೆಗಡೆ ಆರೋಪಿಸಿದ್ದಾರೆ. `ಇದನ್ನು ಶಾಸಕರ ಆಪ್ತರೇ ಹೇಳಿಕೊಂಡಿದ್ದು, ಸರ್ಕಾರ ಅನುದಾನ ಕೊಡದ ಕಾರಣ ಆಸ್ಪತ್ರೆಯನ್ನು ಕೆಳದರ್ಜೆಗಿಳಿಸುವ ಶಾಸಕರ ಪ್ರಯತ್ನ ಜನತೆಗೆ ಮಾಡುವ ದ್ರೋಹ’ ಎಂದು ಹೇಳಿದ್ದಾರೆ.
`ಶಿರಸಿ ಹೈಟೆಕ್ ಆಸ್ಪತ್ರೆಗೆ ಅವಶ್ಯವಿರುವ ಎಲ್ಲ ಸೌಲಭ್ಯವನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಜೂರಿ ಮಾಡಿಸಿಕೊಂಡು ಬಂದಿದ್ದರು. ಆದರೆ, ಶಾಸಕ ಭೀಮಣ್ಣ ನಾಯ್ಕ ಅದನ್ನು ಮುಂದುವರೆಸಿಲ್ಲ’ ಎಂಬುದು ಅನಂತಮೂರ್ತಿ ಹೆಗಡೆ ಅವರ ಆರೋಪ. `ಹೈಟೆಕ್ ಆಸ್ಪತ್ರೆಗಿರುವ ಸೌಲಭ್ಯವನ್ನು ನಿರಾಕರಿಸಿ ಕೆಳದರ್ಜೆಯ ಆಸ್ಪತ್ರೆಯನ್ನಾಗಿಸುವುದು ಎಂದಿಗೂ ಸರಿಯಲ್ಲ. ಹೊಸ ವೈದ್ಯಾಧಿಕಾರಿಗಳನ್ನ ನೇಮಿಸಿಕೊಂಡು ಸಲಕರಣೆಗಾಗಿ 30 ಕೋಟಿ ಬದಲಿಗೆ 5.20 ಕೋಟಿ ಪ್ರಸ್ತಾವನೆ ಕಳುಹಿಸಿರುವುಸು ಸಮಂಜಸವಲ್ಲ’ ಎಂದು ಅನಂತಮೂರ್ತಿ ಹೇಳಿದ್ದಾರೆ.
15 ದಿನದ ಗಡುವು:
`ಆಸ್ಪತ್ರೆ ಕುರಿತಾದ ಗೊಂದಲ ನಿವಾರಣೆಗೆ ಇನ್ನೂ 15 ದಿನ ಕಾಯುತ್ತೇವೆ. ಹೈಟೆಕ್ ಆಸ್ಪತ್ರೆ ವಿಚಾರದಲ್ಲಿ ಶಾಸಕ ಭೀಮಣ್ಣ ನಾಯ್ಕ ಜನತೆಯ ಕ್ಷಮೆ ಕೇಳಬೇಕು’ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. `ಇಲ್ಲವಾದಲ್ಲಿ ಬೀದಿ ಬೀದಿ ಸಂಚರಿಸಿ ಸಹಿ ಅಭಿಯಾನ ನಡೆಸುವೆ’ ಎಂದು ಹೇಳಿದ್ದಾರೆ.
ಆದರೆ, ಈವರೆಗೂ ಭೀಮಣ್ಣ ನಾಯ್ಕ ಅನಂತಮೂರ್ತಿ ಹೆಗಡೆ ಅವರ ಯಾವ ಬೇಡಿಕೆಗೂ ಬಗ್ಗಿಲ್ಲ. ಹೀಗಾಗಿ ಈ ಪ್ರಕರಣ ರಾಜಿಯಲ್ಲಿ ಬಗೆಹರಿಯುವ ಸಾಧ್ಯತೆಗಳು ಕಾಣುತ್ತಿಲ್ಲ.