ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಆಲೆಮನೆಗೆ ಭೇಟಿ ನೀಡಿದ್ದಾರೆ. ಕಬ್ಬು ಅರೆಯುವ ವಿಧಾನ, ಬೆಲ್ಲ ತಯಾರಿಕೆ ಜೊತೆ ಕಬ್ಬಿನ ಬಗೆ ಬಗೆಯ ಖಾದ್ಯಗಳನ್ನು ನೋಡಿ ಅವರು ಸಂತಸ ಹಂಚಿಕೊoಡಿದ್ದಾರೆ.
ಯಲ್ಲಾಪುರ-ಅoಕೋಲಾ ಗಡಿಭಾಗದ ಗುಳ್ಳಾಪುರದಲ್ಲಿ ಭಾನುವಾರ ಸಂಜೆ ಆಲೆಮನೆ ಹಬ್ಬ ಆಯೋಜಿಸಲಾಗಿದ್ದು, ಡೀಸಿ ಲಕ್ಷ್ಮೀಪ್ರಿಯಾ ಮುಖ್ಯ ಅತಿಥಿಯಾಗಿದ್ದರು. ಜಿಲ್ಲೆಯಲ್ಲಿನ ಸಂಪನ್ಮೂಲ, ವೈವಿಧ್ಯಮಯ ಆಚರಣೆ ಹಾಗೂ ಶ್ರೀಮಂತ ಸಾಂಸ್ಕೃತಿಕ ಹಿರಿಮೆಯನ್ನು ಅವರು ಕೊಂಡಾಡಿದರು.
ಕಬ್ಬಿನ ಹಾಲಿನಿಂದ ತಯಾರಿಸುವ ಆಹಾರ ಹಾಗೂ ಸಿಹಿ ತಿಂಡಿಗಳ ತಯಾರಿಕೆಯ ವಿಧಾನಗಳನ್ನು ಲಕ್ಷ್ಮೀಪ್ರಿಯಾ ವೀಕ್ಷಿಸಿದರು. ಸ್ಥಳೀಯ ಕಲಾವಿದರಿಂದ ನಡೆದ ಮನರಂಜನಾ ಕಾರ್ಯಕ್ರಮದಲ್ಲಿಯೂ ಅವರು ಭಾಗಿಯಾದರು. ಆವರಣದಲ್ಲಿನ ವ್ಯಾಪಾರ ಮಳಿಗೆ, ಪ್ರದರ್ಶನಗಳ ಬಳಿ ತೆರಳಿ ಮಾಹಿತಿ ಪಡೆದರು. ಉಪನ್ಯಾಸ, ಕೀರ್ತನೆ ಹಾಗೂ ಗಾಯನ ಕಾರ್ಯಕ್ರಮಗಳಿಗೂ ಅವರು ಕಿವಿಯಾದರು. ಕಬ್ಬಿನಿಂದ ತಯಾರಿಸಿದ ಸಿಹಿ ತಿನಿಸುಗಳನ್ನು ಅವರು ಸವಿದರು.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ, ತೆಂಗು, ಬಾಳೆ ಕಾಳುಮೆಣಸು ಮುಂತಾದ ಸಾಂಬಾರು ಪದಾರ್ಥಗಳನ್ನು ಹೆಚ್ಚು ಬೆಳೆಯಾಗುತ್ತದೆ. ಆ ಬೆಳೆಗಳನ್ನು ಸಂಸ್ಕರಣೆಗಾಗಿ ಬೇರೆಡೆ ಕಳುಹಿಸುವ ಬದಲು ಇಲ್ಲಿಯೇ ಮೌಲ್ಯವರ್ಧನೆ ಮಾಡುವ ಪ್ರಯತ್ನ ನಡೆಯಬೇಕು’ ಎಂದು ಈ ವೇಳೆ ಜಿಲ್ಲಾಧಿಕಾರಿ ಕರೆ ನೀಡಿದರು. ಸಾಂಪ್ರದಾಯಿಕ ಕಬ್ಬು ಬೆಳೆಗಾರ ಕೈಗಡಿಯ ಕೃಷ್ಣ ಕುಣಬಿ ಅವರನ್ನು ಸನ್ಮಾನಿಸಲಾಯಿತು.