ಉತ್ತರ ಕನ್ನಡ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಇ-ಹುಂಡಿ ಸೇವೆ ಬಂದು ಹಲವು ವರ್ಷ ಕಳೆದಿದೆ. ಆದರೆ, ದೇವಾಲಯಗಳ ಮುಂದೆ ಕೂರುವ ಭಿಕ್ಷುಕರಿಗೆ ಆನ್‌ಲೈನ್ ಹಣ ಪಾವತಿ ಜಿಲ್ಲೆಯಲ್ಲಿರಲಿಲ್ಲ. ಇದೀಗ, ಗೋಕರ್ಣದಲ್ಲಿ ಆನ್‌ಲೈನ್ ಮೂಲಕ ಪಾವತಿಸಬಹುದಾದ `ಭಿಕ್ಷು ಕರ’ ಜಾರಿಗೆ ಬಂದಿದೆ!
ಶಿವರಾತ್ರಿ ಹಿನ್ನಲೆ ಪುರಾಣ ಪ್ರಸಿದ್ಧ ಗೋಕರ್ಣಕ್ಕೆ ಲಕ್ಷಾಂತರ ಜನ ಭೇಟಿ ನೀಡುತ್ತಿದ್ದಾರೆ. ಭಕ್ತರ ಆಗಮನ ಅರಿತ ಭಿಕ್ಷುಕರು ಸಹ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದಾರೆ. ಭಿಕ್ಷಾಟನೆಯಲ್ಲಿ ನಿರತರಾದವರು ಫೋನ್ ಫೇ ಮೂಲಕ ಕಾಸು ಪಡೆಯುತ್ತಿರುವುದು ಈ ಸಲದ ವಿಶೇಷ!
ಶುಕ್ರವಾರ ಮಹಾಬಲೇಶ್ವರ ದೇವಸ್ಥಾನ ಎದುರು ಇಬ್ಬರು ಫೋನ್ ಫೇ ಮೂಲಕ ಭಿಕ್ಷೆ ಬೇಡುತ್ತಿರುವುದು ಗಮನಸೆಳೆಯಿತು. ಕಣ್ಣು ಕಾಣದ ಯುವಕ ಹಾಗೂ ಯುವತಿ ಧ್ವನಿವರ್ಧಕ ಬಳಸಿ ಹಾಡುತ್ತಿದ್ದರು. ಜೊತೆಗೆ ಫೋನ್ ಫೇ ಸ್ಕಾನರ್ ಬಳಸಿ ಹಣ ಹಾಕುವಂತೆ ಅವರು ಅಲ್ಲಿದ್ದವರಿಗೆ ಮನವಿ ಮಾಡುತ್ತಿದ್ದರು.
ಇದರೊಂದಿಗೆ ವಯೋವೃದ್ಧರೊಬ್ಬರು ಅಲ್ಲಲ್ಲಿ ಸಂಚರಿಸಿ ಭಿಕ್ಷೆ ಬೇಡುತ್ತಿರುವುದು ಕಾಣಿಸಿತು. ಆ ವೃದ್ಧರೂ ಸಹ ಫೋನ್ ಫೇ ಸ್ಕಾನರ್ ಹೊಂದಿದ್ದರು. `ಚಿಲ್ಲರೆ ಇಲ್ಲ’ ಎನ್ನುವವರ ಮುಂದೆ ಸ್ಕಾನರ್ ತೋರಿಸಿ ಅವರು ಕೈ ಒಡ್ಡುತ್ತಿದ್ದರು. ಅನೇಕ ಭಕ್ತರು ಅವರ ಜೋಳಿಗೆಗೆ ಕಾಸು ಹಾಕಿದರು. ಕೆಲವರು ಸ್ಕಾನರ್ ಬಳಸಿ ಭಿಕ್ಷುಕರ ಬದುಕಿಗಾಗಿ ಆನ್‌ಲೈನ್ ಕಾಣಿಕೆ ಸಲ್ಲಿಸಿದರು.