ನಿಷೇಧಿತ ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಸುತ್ತಿದ್ದ ಹೊಟೇಲ್ ಮೇಲೆ ಶಿರಸಿ ನಗರಸಭೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಿರಸಿ ನಗರದ ಹಲವು ಹೊಟೇಲ್‌ಗಳಲ್ಲಿ ಇಡ್ಲಿ ಪಾತ್ರೆಗೆ ಪ್ಲಾಸ್ಟಿಕ್ ಅಂಟಿಸಿ ಹಿಟ್ಟು ಬೇಯಿಸಲಾಗುತ್ತದೆ. ಇದರಿಂದ ಇಡ್ಲಿ ಪಾತ್ರೆಗೆ ಹಿಟ್ಟು ಅಂಟುವುದು ತಪ್ಪುತ್ತದೆ. ಜೊತೆಗೆ ಇಡ್ಲಿ ಸಹ ಮೆತ್ತನೆಯ ಅನುಭೂತಿ ನೀಡುತ್ತದೆ. ಆದರೆ, ಇಡ್ಲಿ ಜೊತೆ ಪ್ಲಾಸ್ಟಿಕ್ ಸಹ ಬೇಯುವುದರಿಂದ ಅದನ್ನು ಸೇವಿಸುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಈ ಬಗ್ಗೆ ಅರಿವಿದ್ದರೂ ಕೆಲ ಹೊಟೇಲ್ ಮಾಲಕರು ಕಡಿಮೆ ಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಚತಾ ಕಾರ್ಯ ನಿರ್ವಹಿಸುವುದಕ್ಕಾಗಿ ಪ್ಲಾಸ್ಟಿಕ್ ಮೊರೆ ಹೋಗಿದ್ದಾರೆ. ಅದರಂತೆ, ಶಿವಾಜಿ ಚೌಕ ಬಳಿಯ ನಂದಿನಿ ಹೊಟೇಲಿನಲ್ಲಿ ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಸುತ್ತಿರುವ ಬಗ್ಗೆ ನಗರಸಭೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದು, ಭಾನುವಾರ ಬೆಳಗ್ಗೆ ಅಧಿಕಾರಿಗಳು ದಾಳಿ ನಡೆಸಿದರು.
ನಿಷೇಧಿತ ಪ್ಲಾಸ್ಟಿಕ್ ಬಳಸಿ ಆಹಾರ ತಯಾರಿಸುತ್ತಿರುವ ಬಗ್ಗೆ ದಾಳಿ ನಡೆಸಿದ ಅಧಿಕಾರಿಗಳು ಹೊಟೇಲ್ ಮಾಲಕನಿಗೆ ಈ ಬಗ್ಗೆ ಸಮಜಾಯಿಶಿ ಕೇಳಿದರು. ಹೊಟೇಲ್ ಮಾಲಕ ಸೂಕ್ತ ಉತ್ತರ ನೀಡುವಲ್ಲಿ ವಿಫಲರಾದರು. ಹೀಗಾಗಿ ಹೊಟೇಲಿನವರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. `ಇನ್ನಷ್ಟು ಹೊಟೇಲ್’ಗಳ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಬೇಕು. ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹೊಟೇಲ್’ಗಳನ್ನು ಬಂದ್ ಮಾಡಿಸಬೇಕು’ ಎಂಬ ಬಗ್ಗೆಯೂ ಜನ ಆಗ್ರಹಿಸಿದ್ದಾರೆ.