ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಸತೀಶನ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತನ ಸಾವಿನಲ್ಲಿ ಅನುಮಾನವಿರುವುದಾಗಿ ಕುಟುಂಬದವರು ಪೊಲೀಸರಿಗೆ ಹೇಳಿದ್ದು, ಸಮಗ್ರ ತನಿಖೆಗಾಗಿ ಒತ್ತಾಯಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಬಳಿಯ ವಡೆಹೊಕ್ಕಳಿಯಲ್ಲಿ ಸತೀಶ ಕರಿಗಾರ (35) ಎಲೆಕ್ಟಿಕಲ್ ಕೆಲಸ ಮಾಡಿಕೊಂಡಿದ್ದರು. ಸತೀಶರನ್ನು ಜನ ನಾಗೇಶ್ ಎಂದು ಸಹ ಕರೆಯುತ್ತಿದ್ದರು. ಸತೀಶ ಕರಿಗಾರ ಕೊಡಸೆ ಗ್ರಾಮದ ಲಾವಣ್ಯ (ಹೆಸರು ಬದಲಿಸಿದೆ) ಎಂಬಾತರನ್ನು ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಅವರಿಬ್ಬರ ನಡುವೆ ವೈಮನಸ್ಸು ಕಾಣಿಸಿಕೊಂಡಿತ್ತು. ಅದಾದ ನಂತರ ಲಾವಣ್ಯ ಸತೀಶರನ್ನು ದೂರ ಮಾಡಿದ್ದು, ಇಬ್ಬರು ಮಾತನಾಡುವುದನ್ನು ಬಿಟ್ಟಿದ್ದರು.
ಹುಡುಗಿ ಕೈ ಕೊಟ್ಟ ಕಾರಣ ಸತೀಶ ಕರಿಗಾರ ಬೇಸರಿಸಿಕೊಂಡಿದ್ದರು. `ಜೀವನದಲ್ಲಿ ಬಯಸಿದ್ದು ಏನು ಸಿಗುತ್ತಿಲ್ಲ’ ಎಂದು ನೊಂದಿದ್ದರು. ಫೆ 24ರ ಬೆಳಗ್ಗೆ 7 ಗಂಟೆಗೆ ಮನೆಯಿಂದ ಹೊರಟ ಸತೀಶ್ ಕರಿಗಾರ್ ಮತ್ತೆ ಮನೆಗೆ ಬಂದಿರಲಿಲ್ಲ. ಸಾಕಷ್ಟು ಹುಡುಕಾಟ ನಡೆಸಿದರೂ ಅವರ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನಲೆ ಸತೀಶ ಅವರ ಅಕ್ಕ ಸುನಿತಾ ಕಾಗಲಕರ ಅವರು ಪೊಲೀಸ್ ದೂರು ನೀಡಿದ್ದರು. ಸತೀಶ ಕರಿಗಾರರನ್ನು ಹುಡುಕಿಕೊಡುವಂತೆ ಅವರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರು.
ಈ ನಡುವೆ ಫೆ 28ರ ರಾತ್ರಿ ತೋಟದಲ್ಲಿರುವ ಹಳೆಯ ಮನೆ ಬಳಿ ಶವವೊಂದು ಅರೆಬೆಂದ ಸ್ಥಿತಿಯಲ್ಲಿರುವ ಬಗ್ಗೆ ಸುದ್ದಿ ಸಿಕ್ಕಿತು. ಅಲ್ಲಿ ಹೋಗಿ ಪರಿಶೀಲಿಸಿದ ಕುಟುಂಬದವರಿಗೆ ಅದು ಸತೀಶನ ಶವ ಎಂದು ಖಾತ್ರಿಯಾಯಿತು. ಚಿತ್ರದುರ್ಗದಲ್ಲಿ ನೌಕರಿ ಮಾಡುತ್ತಿರುವ ಸತೀಶರ ಸಹೋದರ ಸಂದೀಪ ಕರಿಗಾರ ಸಹ ಮಾವಿನ ಮರದ ಬುಡದಲ್ಲಿ ಬೆಂಕಿಗೆ ಆಹುತಿಯಾದ ಶವ ನೋಡಿದರು. ಎಲ್ಲರೂ ಇದನ್ನು `ಆತ್ಮಹತ್ಯೆ’ ಎಂದರು. ಆದರೆ, ಸತೀಶ ಅವರ ಮನಸ್ಸು ಅದನ್ನು ಒಪ್ಪಲಿಲ್ಲ.
ಹೀಗಾಗಿ ಪೊಲೀಸ್ ಠಾಣೆಗೆ ತೆರಳಿದ ಸಂದೀಪ ಕರಿಗಾರ್ ಅವರು ಸಹೋದರನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಈ ಸಾವಿನ ನೈಜ ಕಾರಣ ಪತ್ತೆ ಮಾಡುವಂತೆ ಕೋರಿ ಪ್ರಕರಣವನ್ನು ದಾಖಲಿಸಿದರು. ಪೊಲೀಸ್ ಸಿಬ್ಬಂದಿ ರೇಣುಕಾ ಬೆಳಕಟ್ಟಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.