ಅಶೀಸರದ ಅನಂತ ಹೆಗಡೆಯವರಿಗೆ ಮೊದಲಿನಿಂದಲೂ ವನ್ಯಜೀವಿಗಳ ಮೇಲೆ ಅಕ್ಕರೆ. ಆ ಅಕ್ಕರೆ ಅವರನ್ನು ಕಾಡಿಗೆ ಕರೆದುಕೊಂಡು ಹೋಗಿ ಗಿಡ – ಮರಗಳನ್ನು ಪರಿಚಯಿಸಿತು. ಬಾಲ್ಯದಲ್ಲಿ ಅವರನ್ನು ಸೆಳೆದ ಕಾಡು, ಹಕ್ಕಿ, ಗಿಡ – ಮರಗಳ ವಿಸ್ಮಯ ಅರಣ್ಯದ ಬಗ್ಗೆ ಪ್ರೀತಿ ಮೂಡಿಸಿತು. ಆ ಪ್ರೀತಿ ಕಾಳಜಿಯಾಗಿ `ವನ್ಯ ಸಂಪತ್ತು ನಮ್ಮೆಲ್ಲರ ಆಸ್ತಿ’ ಎಂದು ಹೇಳಿಕೊಟ್ಟಿತು. ಹೀಗಾಗಿ ಆ ಆಸ್ತಿ ರಕ್ಷಣೆಗಾಗಿ ಅವರು ಶ್ರಮಿಸುತ್ತಿದ್ದಾರೆ.
ಅರಣ್ಯ, ಪರಿಸರ, ಸಾಮಾಜಿಕ ಹೋರಾಟಗಳ ಮೂಲಕ ಬೆಳೆದು ಬಂದವರು ಅನಂತ ಹೆಗಡೆ ಅಶೀಸರ. ಆ ಅಶೀಸರ ಎಂಬುದು ಶಿರಸಿ ತಾಲೂಕಿನ ಪುಟ್ಟ ಹಳ್ಳಿ. ಆ ಹಳ್ಳಿಯಲ್ಲಿನ ಜೀವ ವೈವಿಧ್ಯತೆಯನ್ನು ಕಣ್ತುಂಬಿಕೊoಡು ಬಂದಿದ್ದ ಅವರಿಗೆ ಕಾಡು ಕಡಿಯುವವರನ್ನು ಕಂಡಾಗ ಕೋಪ ಬರುತ್ತಿತ್ತು. ಇದೇ ಕೋಪ ಹೋರಾಟದ ಹಾದಿಯನ್ನು ತೋರಿಸಿತು. ಹೀಗಾಗಿ ಅನಂತ ಹೆಗಡೆ ಅಶೀಸರ ಕೇವಲ ಪರಸರ ಆರಾಧಕರಾಗಿ ಇರದೇ, ಹೋರಾಟಗಾರರೂ ಆದರು.
ಪರಿಸರ ಹೋರಾಟದ ನಡುವೆಯೇ ಅವರು ಅರ್ಥಶಾಸ್ತದಲ್ಲಿ ಸ್ನಾತಕೋತ್ತರ ಪದವಿ ಮುಗಿಸದರು. ಪದವಿ ಮುಗಿಸಿದ ನಂತರ ಉದ್ಯೋಗ ಬೇಕಲ್ಲ? ಹೀಗಾಗಿ ಮನೆಯಲ್ಲಿ ಉಳಿದು ಕೃಷಿಯನ್ನೇ ಅವರು ಮುಖ್ಯ ಉದ್ಯೋಗವನ್ನಾಗಿಸಿಕೊಂಡರು. ಅವರ ಕಾಡು ಕೃಷಿಯ ಶ್ರದ್ಧೆ, ಪರಿಸರದ ಬಗೆಗಿನ ಕಾಳಜಿ `ಜೀವವೈವಿಧ್ಯ ಮಂಡಳಿ’ಯ ಹುದ್ದೆಯವರೆಗೂ ಕರೆದುಕೊಂಡು ಹೋಯಿತು. ರಾಜ್ಯ ಸರ್ಕಾರದಿಂದ ಪರಿಸರ ಪ್ರಶಸ್ತಿ ಪಡೆದ ಅವರು ನಂತರ ಇನ್ನಷ್ಟು ಲವಲವಿಕೆಯಿಂದ ಚಟುವಟಿಕೆ ಶುರು ಮಾಡಿದರು. ಪಶ್ಚಿಮಘಟ್ಟ ಕಾರ್ಯಪಡೆ ಎಂಬ ಸಂಘಟನೆ ಕಟ್ಟಿ ಎಲ್ಲಡೆ ಓಡಾಡಿದರು. ಔಷಧಿ ಸಸ್ಯಗಳ ಪ್ರಾಧಿಕಾರದ ಮೂಲಕ ಅಪರೂಪದ ಸಸ್ಯಗಳನ್ನು ರಕ್ಷಿಸುವ ಪ್ರಯತ್ನ ನಡೆಸಿದರು. ಇದರೊಂದಿಗೆ ಹತ್ತು ಹಲವು ಸಂಘ-ಸoಸ್ಥೆಗಳಲ್ಲಿ ಅವರಿಗೆ ಸನ್ಮಾನ ದೊರೆಯಿತು. ಆ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳ ಗೌರವವೂ ದಕ್ಕಿತು.
ಇದೆಲ್ಲ ಆಗುವವರೆಗೆ ಅವರ ಹೋರಾಟದ ಜೀವನಕ್ಕೆ 40 ವರ್ಷ ಕಳೆದಿದ್ದು, ಇದೀಗ ಜಾಗೃತಿಯ ಅಭಿಯಾನ ಮುಂದುವರೆದಿದೆ. ನದಿ ಕಣಿವೆ ಮತ್ತು ಕರಾವಳಿ ಪ್ರದೇಶದ ಸಂರಕ್ಷಣೆಗಾಗಿ ಅವರು ದುಡಿಯುತ್ತಿದ್ದಾರೆ. ಕೈಗಾ, ಬೇಡ್ತಿ, ಶರಾವತಿ, ತದಡಿ, ಹಣಕೋಣ, ಅಂಬರಗುಡ್ಡ, ಕುದುರೆಮುಖ, ಭದ್ರ ಕಣಿವೆ, ನೇತ್ರಾವತಿ ಕಣಿವೆಯ ಉಳಿವಿಗಾಗಿ ಜನ ಆಂದೋಲನ ನಡೆಸಿದ್ದಾರೆ. ವಿವಿಧ ಪರಿಸರಗಳಲ್ಲಿ ಅವರು ಪರಿಸರ ಅಧ್ಯಯನ ಶಿಬಿರ ನಡೆಸಿದ್ದು, ವಿಜ್ಞಾನಿಗಳ ಜೊತೆ ಸೇರಿ ವೈಜ್ಞಾನಿಕ ಕಾರ್ಯಗಾರ ನಡೆಸಿದ್ದಾರೆ. ಇದೇ ಜನ ಜಾಗೃತಿಯ ಅಂಗವಾಗಿ 2024ರ ಜೂ 23ರಂದು ರವಿವಾರ ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಪರಿಸರ ಕಾರ್ಯಕರ್ತರ ಸಮಾವೇಶವನ್ನು ಸಹ ಆಯೋಜಿಸಿದ್ದಾರೆ.
– ಅಚ್ಯುತಕುಮಾರ ಯಲ್ಲಾಪುರ
Discussion about this post