`ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ವಿತರಣೆಗೆ ಆಗುವ ತೊಡಕು ತಪ್ಪಿಸಲು ಸ್ವಯಂ ಚಾಲಿತ ಹವಾಮಾನ ಮತ್ತು ಮಳೆ ಮಾಪನ ಕೇಂದ್ರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಜಾಸ್ತಿಯಿದೆ. ಇಲ್ಲಿನ ಹವಾಮಾನ ಕೂಡ ಅನೇಕ ಬಾರಿ ರೈತರಿಗೆ ಪೂರಕವಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಇಲ್ಲಿಯ ರೈತರು ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ 2016ರಿಂದ ಜಾರಿಯಲ್ಲಿದೆ’ ಎಂದವರು ಪತ್ರದಲ್ಲಿ ವಿವರಿಸಿದ್ದಾರೆ.
`ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಅಡಕೆ, ತೆಂಗು, ಬಾಳೆ, ಮಾವು, ಕಾಳು ಮೆಣಸು ಮತ್ತು ಶುಂಠಿ ಪ್ರಮುಖ ಬೆಳೆಯಾಗಿದೆ. ಪೃಕೃತಿ ವಿಕೋಪವಾದಾಗ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ನೆರವಿಗೆ ಬರುತ್ತದೆ. ಕಂದಾಯ ಇಲಾಖೆ ಅಡಿಯಲ್ಲಿರುವ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ನೀಡುವ ಹವಾಮಾನ ದತ್ತಾಂಶ ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಪರಿಹಾರ ಮಂಜೂರಿಗೆ ಪ್ರಮುಖ ಮಾನದಂಡವಾಗಿದೆ. ಈ ಸಂಸ್ಥೆ ಹೋಬಳಿ ಮಟ್ಟದಲ್ಲಿ ಸ್ವಯಂ ಚಾಲಿತ ಮಳೆ ಮಾಪನ ನಡೆಸಿ ಮಾಹಿತಿ ರವಾನಿಸುತ್ತಿದೆ. ಆದರೆ, ಅದು ಸರಿಯಿಲ್ಲದ ಕಾರಣ ಸಮಸ್ಯೆಯಾಗಿದೆ’ ಎಂದವರು ಹೇಳಿದ್ದಾರೆ.
`2023ರಲ್ಲಿ ಕ್ಷೆಮಾ ಜನರಲ್ ಇನ್ಸೂರೆನ್ ಕಂಪನಿ ಜಿಲ್ಲೆಯ ಹವಾಮಾನ ಆಧಾರಿತ ಬೆಳೆ ವಿಮೆಯ ಕಂತು ತುಂಬಿಸಿಕೊoಡ ಅಧಿಕೃತ ಸಂಸ್ಥೆಯಾಗಿದೆ. ಕಳೆದ ಮಳೆಗಾಲದ ಅತಿವೃಷ್ಠಿಯಿಂದಾಗಿ ಜಿಲ್ಲೆಯಲ್ಲಿ ಅಡಕೆ ಸೇರಿದಂತೆ ವಿವಿಧ ಬೆಳೆ ಹಾನಿ ಸಂಭವಿಸಿದೆ. ಜಿಲ್ಲೆಯ 195 ಗ್ರಾಮ ಪಂಚಾಯಿತಿಗಳಲ್ಲಿ ಬೆಳೆ ಹಾನಿಯಾಗಿದ್ದು, ಕ್ಷೆಮಾ ಸಂಸ್ಥೆ ಕಳೆದ ಅಕ್ಟೋಬರ್ ತಿಂಗಳ ವೇಳೆ ಪರಿಹಾರ ವಿತರಣೆ ಮಾಡಬೇಕಿತ್ತು. ಆದರೆ, ಫೆಬ್ರವರಿ ತಿಂಗಳಿನಲ್ಲಿ ಜಿಲ್ಲೆಯ 59 ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಪರಿಹಾರ ಹಣ ಜಮಾ ಮಾಡಿದೆ. ಉಳಿದ 136 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ಮಾಪನ ಕೇಂದ್ರದ ದತ್ತಾಂಶ ಸರಿ ಇಲ್ಲ ಎಂದು ಪರಿಹಾರ ವಿತರಣೆಗೆ ನಿರಾಕರಿಸಿದೆ’ ಎಂದವರು ವಿವರಿಸಿದ್ದಾರೆ.
`ಈ ರೀತಿ ತಾಂತ್ರಿಕ ಕಾರಣವನ್ನು ಕಂಪನಿ ನೀಡಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯ ಬಾಕಿ ಉಳಿದ 136 ಗ್ರಾಮ ಪಂಚಾಯಿತಿ ರೈತರಿಗೆ ನೀಡಬೇಕಾದ ಪರಿಹಾರವನ್ನು ಒಂದು ವಾರದೊಳಗೆ ರೈತರ ಖಾತೆಗೆ ಜಮಾ ಮಾಡುವಂತೆ ಸೂಚಿಸಿದೆ. ಅದಾಗಿಯೂ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಗೆ ಒಳಪಟ್ಟಿರುವ ಜಿಲ್ಲೆಯ ಸ್ವಯಂಚಾಲಿತ ಹವಾಮಾನ ಮತ್ತು ಮಳೆ ಮಾಪನ ಕೇಂದ್ರಗಳ ನಿರ್ವಹಣೆ ಕೈಗೊಳ್ಳಬೇಕಿದೆ. ಭವಿಷ್ಯದಲ್ಲಿ ಇಂತಹ ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳುವ ಸಲುವಾಗಿ ಈ ಕೇಂದ್ರಗಳ ಸೂಕ್ತ ನಿರ್ವಹಣೆ ಮಾಡುವಂತೆ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಗೆ ಸೂಕ್ತ ಸೂಚನೆ ನೀಡಬೇಕು’ ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.