ಖಾಸಗಿ ಮಾಲಕತ್ವದ ಜಾಗಕ್ಕೆ ತೆರಳಲು ಯಲ್ಲಾಪುರ ಪಟ್ಟಣ ಪಂಚಾಯತ ವಿಶೇಷ ಆಸಕ್ತಿವಹಿಸಿ ಸರ್ಕಾರಿ ಅನುದಾನ ನೀಡಿದೆ. ಇದಕ್ಕೆ ಕೆಲವರು ತಕರಾರು ಸಲ್ಲಿಸಿ ಮುಖ್ಯಮಂತ್ರಿ ಕಚೇರಿಗೆ ಅರ್ಜಿ ಮಾಡಿದ್ದಾರೆ!
ಯಲ್ಲಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯ ಸವಣಗೇರಿ ಬಳಿ ರಸ್ತೆ ನಿರ್ಮಾಣಕ್ಕೆ ಪ ಪಂ 2.5 ಲಕ್ಷ ರೂ ಹಣ ಮಂಜೂರಿ ಮಾಡಿದೆ. ಸ್ಥಳ ತೋರಿಸಿದ ಪ್ರಕಾರ ಗುತ್ತಿಗೆದಾರರು ರಸ್ತೆ ಕೆಲಸವನ್ನು ಶುರು ಮಾಡಿದ್ದಾರೆ. ಸ್ಥಳಕ್ಕೆ ಜಲ್ಲಿ, ಕಡಿ ಸೇರಿ ವಿವಿಧ ಸಾಮಗ್ರಿ ಬಂದು ಬಿದ್ದ ನಂತರ ಆ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ!
ಯಲ್ಲಾಪುರ ಪಟ್ಟಣದಿಂದ 3ಕಿಮೀ ದೂರದ ಸವಣಗೇರಿ ಬಳಿ ಮೂರು ಜನ ಸೇರಿ ಭೂಮಿ ಖರೀದಿಸಿದ್ದರು. ತಮ್ಮ ಜಾಗಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲದ ಕಾರಣ ಅವರು ಪಟ್ಟಣ ಪಂಚಾಯತ ಸದಸ್ಯೆ ಪುಷ್ಪಾ ನಾಯ್ಕ ಅವರ ಬಳಿ ಮನವಿ ಮಾಡಿದ್ದರು. ಅದರ ಪ್ರಕಾರ ಪಟ್ಟಣ ಪಂಚಾಯತದಿಂದ ರಸ್ತೆ ನಿರ್ಮಾಣಕ್ಕಾಗಿ ಅನುದಾನ ನೀಡಿದ್ದರು. ಆದರೆ, ಪುಷ್ಪಾ ನಾಯ್ಕ ಅವರಿಗೂ ಆ ನಂತರ ಅಲ್ಲಿನ ಜಾಗ ಭೂ ಪರಿವರ್ತನೆ ಆಗದಿರುವ ಬಗ್ಗೆ ಗಮನಕ್ಕೆ ಬಂದಿತು. ಹೀಗಾಗಿ ಅವರು ಆ ಕೆಲಸ ಮುಂದುವರೆಸದ0ತೆ ಗುತ್ತಿಗೆದಾರರಿಗೂ ಸೂಚಿಸಿದರು.
`ರಸ್ತೆ ನಿರ್ಮಾಣ ವಿಷಯದಲ್ಲಿ ತಕರಾರುಗಳಿರುವ ಬಗ್ಗೆ ಮುಂಚಿತವಾಗಿ ತಿಳಿಸಿದರೆ ಅನುದಾನವನ್ನು ಮೀಸಲಿಡುತ್ತಿರಲಿಲ್ಲ. ಸದ್ಯ ಕೆಲಸ ಸ್ಥಗಿತಗೊಳಿಸಲಾಗಿದ್ದು, ಆ ಹಣವನ್ನು ಅಗತ್ಯವಿರುವ ಕಡೆ ವಿನಿಯೋಗಿಸಿ ಅಭಿವೃದ್ಧಿ ಮಾಡಲಾಗುತ್ತದೆ’ ಎಂದು ಪುಷ್ಪಾ ನಾಯ್ಕ ಮಾಹಿತಿ ನೀಡಿದರು. ಪ ಪಂ ಆದೇಶದ ಪ್ರಕಾರ ಹಣ ವಿನಿಯೋಗಿಸಿ ಕೆಲಸ ಶುರು ಮಾಡಿರುವ ಗುತ್ತಿಗೆದಾರರು ಈ ವಿಷಯದಲ್ಲಿ ಕೈ ಸುಟ್ಟುಕೊಂಡಿದ್ದಾರೆ.





