ಸರಾಯಿ ಕುಡಿದು ಕೆಲಸಕ್ಕೆ ಬಂದಿದ್ದ ಕಾರಣ ಪೊಲೀಸ್ ಅಧಿಕಾರಿಯೊಬ್ಬರು ಅಮಾನತಾಗಿದ್ದಾರೆ. ಮದ್ಯದ ನಶೆಯಲ್ಲಿ ತೂರಾಡುತ್ತಿದ್ದ ಕುಮಟಾ ಎಎಸ್‌ಐ ನಾಗರಾಜಪ್ಪ ಎಸ್ ಅವರನ್ನು ಅಮಾನತು ಮಾಡಿ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಆದೇಶ ಹೊರಡಿಸಿದ್ದಾರೆ.
ಮಾರ್ಚ 11ರ ರಾತ್ರಿ ಕುಮಟಾ ಎಎಸ್‌ಐ ನಾಗರಾಜಪ್ಪ ಎಸ್ ಅವರನ್ನು ಶಿರಸಿ-ಕುಮಟಾ ರಸ್ತೆಯ ಕತಗಾಲ್ ತಪಾಸಣಾ ಕೇಂದ್ರದ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ನಾಗರಾಜಪ್ಪ ಎಸ್ ಅವರು ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗಿದ್ದರು. ಮದ್ಯದ ನಶೆಯಲ್ಲಿ ಅವರು ತೂರಾಡುತ್ತಿದ್ದರು. ಇತರೆ ಸಿಬ್ಬಂದಿ ಜೊತೆ ಅನುಚಿತವಾಗಿಯೂ ವರ್ತಿಸಿದ್ದರು.
ಈ ದಿನ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಅದೇ ಮಾರ್ಗವಾಗಿ ಸಂಚರಿಸುತ್ತಿದ್ದರು. ದಾರಿ ಮದ್ಯೆ ತಪಾಸಣಾ ಕೇಂದ್ರಕ್ಕೆ ಹೋಗಿ ಅಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು ಮಾತನಾಡಿಸಿದರು. ಆಗ, ಎಎಸ್‌ಐ ನಾಗರಾಜಪ್ಪ ಎಸ್ ಮದ್ಯದ ನಶೆಯಲ್ಲಿರುವುದು ಗಮನಕ್ಕೆ ಬಂದಿತು. ಸಮವಸ್ತಲ್ಲಿರುವಾಗ ಮದ್ಯ ಸೇವನೆ ಮಾಡಿ ಕರ್ತವ್ಯಕ್ಕೆ ಹಾಜರಾಗಿರುವುದನ್ನು ಅರಿತು ಎಂ ನಾರಾಯಣ ಅವರು ಗರಂ ಆದರು.
ಇನ್ನೂ ಪಿಎಸ್‌ಐ ಮಯೂರ ಪಟ್ಟಣ ಶೆಟ್ಟಿ ಜೊತೆ ಸಹ ನಾಗರಾಜಪ್ಪ ಎಸ್ ದುರ್ವರ್ತನೆ ತೋರಿದ್ದರು. ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಮುಂದಾದಾಗ ಅಡ್ಡಪಡಿಸಿದ್ದರು. ಸಾಕಷ್ಟು ತಳ್ಳಾಟ-ಗುದ್ದಾಟದ ನಂತರ ಪಿಎಸ್‌ಐ ಮಯೂರ ಪಟ್ಟಣ ಶೆಟ್ಟಿ ಅವರು ನಾಗರಾಜ ಎಸ್ ಅವರನ್ನು ಕುಮಟಾ ಆಸ್ಪತ್ರೆಗೆ ಕರೆತಂದರು.
ಅಲ್ಲಿನ ವೈದ್ಯರು ಎಎಸ್‌ಐ ನಾಗರಾಜ ಎಸ್ ಅವರ ತಪಾಸಣೆ ನಡೆಸಿದರು. ಅವರ ರಕ್ತದಲ್ಲಿ ಆಲ್ಕೋಹಾಲ್ ಪ್ರಮಾಣವಿರುವುದನ್ನು ವೈದ್ಯರು ದೃಢಪಡಿಸಿದರು. ವೈದ್ಯರು ನೀಡಿದ ಪ್ರಮಾಣಪತ್ರ ಆಧರಿಸಿ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಎಎಸ್‌ಐ ನಾಗರಾಜ ಎಸ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದರು.