ಕಳೆದ ಮಳೆಗಾಲದಲ್ಲಿ ಶಿರೂರು ಗುಡ್ಡ ಕುಸಿತದ ಹಿನ್ನಲೆ ಮುನ್ನಚ್ಚರಿಕಾ ಕ್ರಮವಾಗಿ ಅಂಗಡಿಕಾರರಿಗೆ ಸರ್ಕಾರ ನೋಟಿಸ್ ನೀಡಿದೆ. ಗುಡ್ಡದ ಅಡಿಭಾಗ ಹಾಗೂ ಹೆದ್ದಾರಿ ಅಂಚಿನ ಅಂಗಡಿಗಳ ತೆರವಿಗೆ ಸೂಚಿಸಲಾಗಿದೆ.
ಕಳೆದ ವರ್ಷದ ಜುಲೈ 16 ರಂದು ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿದ್ದರಿAದ 11 ಜನ ಸಾವನಪ್ಪಿದ್ದರು. ಆ ಪೈಕಿ ಇಬ್ಬರ ಶವ ಈವರೆಗೂ ಸಿಕ್ಕಿಲ್ಲ. ದುರಂತ ನಡೆದ ರಸ್ತೆ ಪಕ್ಕ ಹಲವು ಅಂಗಡಿಗಳಿದ್ದು, ಅಲ್ಲಿನವರಿಗೆ ಅಪಾಯವಾಗದಂತೆ ಈಗಿನಿಂದಲೇ ಮುನ್ನಚ್ಚರಿಕೆವಹಿಸಲಾಗಿದೆ.
ಸದ್ಯ ಶಿರೂರಿಗೆ ಭೇಟಿ ನೀಡಿದ ಅಧಿಕಾರಿಗಳು ಹೊಟೇಲ್ ಹಾಗೂ ಗೂಡಂಗಡಿಕಾರರನ್ನು ಮಾತನಾಡಿಸಿದ್ದಾರೆ. ಮತ್ತೆ ಗುಡ್ಡ ಕುಸಿಯುವ ಆತಂಕದ ಹಿನ್ನಲೆ ಅಂಗಡಿಗಳನ್ನು ತೆರವು ಮಾಡುವಂತೆ ಮನವರಿಕೆ ಮಾಡಿದ್ದಾರೆ. ಈ ಬಗ್ಗೆ ಅಧಿಕೃತ ನೋಟಿಸ್ ಸಹ ನೀಡಿ ದಾಖಲೆಯನ್ನು ಕಾಪಾಡಿಕೊಂಡಿದ್ದಾರೆ. ಅಂಗಡಿಕಾರರು ಏಪ್ರಿಲ್ 15ರವರೆಗೆ ಸಮಯ ಕೇಳಿದ್ದಾರೆ. ಅದಾಗಿಯೂ, ತಾಲೂಕಾಡಳಿತದಿಂದಲೇ ತೆರವು ಕಾರ್ಯಾಚರಣೆ ನಡೆಸುವುದಾಗಿಯೂ ಅಧಿಕಾರಿಗಳು ಎಚ್ಚರಿಸಿದ್ದಾರೆ.
`ಮಳೆಗಾಲದಲ್ಲಿ ಗುಡ್ಡದ ಅಂಚಿನ ಅಂಗಡಿಗಳಿಗೆ ಅಪಾಯ ಹೆಚ್ಚಿದೆ. ಪ್ರಾಣಹಾನಿ ತಪ್ಪಿಸುವುದಕ್ಕಾಗಿ ಅಂಗಡಿಗಳ ತೆರವಿಗೆ ಸೂಚಿಸಲಾಗಿದೆ’ ಎಂದು ತಹಶೀಲ್ದಾರ್ ನಿಶ್ಚಲ್ ನೊರೋನಾ ಹೇಳಿದರು. `ಮಳೆಗಾಲದಲ್ಲಿ ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸುವುದಿಲ್ಲ. ಜೀವನ ನಡೆಯುವುದೇ ಅಂಗಡಿಗಳಿAದ. ಏಕಾಏಕಿ ತೆರವುಗೊಳಿಸಲು ಸೂಚಿಸಿದರೆ ಕಷ್ಟವಾಗಲಿದೆ’ ಎಂದು ಅಂಗಡಿಕಾರರು ಅಳಲು ತೋಡಿಕೊಂಡರು.
ಅoಕೋಲಾದ ಗ್ರೇಡ್-2 ತಹಶೀಲ್ದಾರ್ ಗಿರೀಶ ಜಾಂಬಾವಳಿಕರ, ಕಂದಾಯ ನಿರೀಕ್ಷಕ ಪ್ರಜೇಶ ಕೇಣಿ, ಭೂಸ್ವಾಧೀನಾಧಿಕಾರಿ ಕಚೇರಿಯ ಸಿಬ್ಬಂದಿ ಸಚಿನ್ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.





