1ನೇ ತರಗತಿಯ ಬಾಲಕಿ ಮೇಲೆ ಬಾಲಕನೊಬ್ಬ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರ ನಡೆಸಿದ ಬಾಲಕನಿಗೆ ಊರಿನ ಜನ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಹಾಗೂ ಅತ್ಯಾಚಾರ ನಡೆಸಿದ ಕಾಮುಕ ಇಬ್ಬರೂ ಅಪ್ರಾಪ್ತರಾದ ಕಾರಣ ಅವರ ಹೆಸರು-ಊರಿನ ಬಗ್ಗೆ ಮಾಧ್ಯಮಗಳು ಪ್ರಕಟಿಸುವ ಹಾಗಿಲ್ಲ. ಹೀಗಾಗಿ ಈ ವರದಿ ಬೇರೆ ಎಲ್ಲಿಯೂ ಪ್ರಕಟವಾಗುವ ಸಾಧ್ಯತೆಗಳಿಲ್ಲ. ಅದಾಗಿಯೂ, ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರು ಕಾಳಜಿವಹಿಸುವ ಬಗ್ಗೆ ಜಾಗೃತಿಗೊಳಿಸುವಿಕೆ ಹಾಗೂ ಕಾಮುಕರಿಂದ ಎಚ್ಚರವಾಗಿರುವ ಕುರಿತು ಅರಿವು ಮೂಡಿಸುವುದಕ್ಕಾಗಿ S News ಡಿಜಿಟಲ್ ಈ ವರದಿ ಪ್ರಸಾರ ಮಾಡುತ್ತಿದೆ.
ಯಲ್ಲಾಪುರ ತಾಲೂಕಿನ ಕಿರವತ್ತಿಯ ಬಳಿಯ ಗುಡ್ಡದ ಮೇಲೆ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಹಳಿಯಾಳ ಕಡೆಯ 17 ವರ್ಷದ ಅಸಾಲಮ ಸಿದಿದಿ (ಹೆಸರು ಬದಲಿಸಿದೆ) ಗುರುವಾರ ಬೆಳಗ್ಗೆ ಚಾಕಲೇಟು ಆಸೆ ತೋರಿಸಿ ಬಾಲಕಿಯನ್ನು ಗುಡ್ಡದ ಮೇಲೆ ಕರೆದೊಯ್ದು, ಲೈಂಗಿಕವಾಗಿ ಬಳಸಿಕೊಂಡ ಬಗ್ಗೆ ದೂರಲಾಗಿದೆ.
ನೋವಿನಿಂದ ಬಳಲಿದ ಬಾಲಕಿ ಜೋರಾಗಿ ಬೊಬ್ಬೆ ಹೊಡೆಯುತ್ತ ಗುಡ್ಡ ಇಳಿದು ಬಂದಿದ್ದನ್ನು ಆ ಊರಿನ ಯುವತಿಯೊಬ್ಬರು ಗಮನಿಸಿದ್ದಾರೆ. `ಏನಾಯಿತು?’ ಎಂದು ಪ್ರಶ್ನಿಸಿದಾಗ ತನಗಾದ ಹಿಂಸೆಯ ಬಗ್ಗೆ ಸಂತ್ರಸ್ತೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದ ಊರಿನ ಜನ ಅತ್ಯಾಚಾರ ಆರೋಪಿಯನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಊರಿನ ಮುಖಂಡರೊಬ್ಬರು ಬಂದು `ಆತನನ್ನು ಸಾಯಿಸಬೇಡಿ’ ಎಂದು ಮನವಿ ಮಾಡಿದ್ದು, ಅದಾದ ನಂತರ ಜನ ಪೊಲೀಸರಿಗೆ ಫೋನಾಯಿಸಿದ್ದಾರೆ.
ಪೊಲೀಸರು ಸಂತ್ರಸ್ತ ಬಾಲಕಿಯನ್ನು ಚಿಕಿತ್ಸೆಗಾಗಿ ಕಾರವಾರಕ್ಕೆ ರವಾನಿಸಿದರು. ಅತ್ಯಾಚಾರಿ ಆರೋಪಿಯನ್ನು ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಶಿರಸಿ ಡಿವೈಎಸ್ಪಿ ಗಣೇಶ ಕೆ ಎಲ್, ಯಲ್ಲಾಪುರ ಸಿಪಿಐ ರಮೇಶ ಹಾನಾಪುರ ಸ್ಥಳ ಪರಿಶೀಲನೆ ಮಾಡಿದ್ದಾರೆ.