ಸಾರ್ವಜನಿಕ ಕೆಲಸ ಮಾಡಿಕೊಡಲು ಲಂಚ ಸ್ವೀಕರಿಸಿದ ಮಲ್ಲೇಶ ಜೆ ಅವರಿಗೆ 2 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಶಿರಸಿಯ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮಲ್ಲೇಶ ಜೆ ಅವರು ಸರ್ವೇಯರ್ ಆಗಿದ್ದರು. ಭೂಮಿ ಅಳತೆ ಕೆಲಸ ಮಾಡಿಕೊಡಲು ಅವರು ಜನರನ್ನು ಪೀಡಿಸುತ್ತಿದ್ದರು. ಕಾಸು ಕೊಟ್ಟವರಿಗೆ ಸಲೀಸಾಗಿ ಕೆಲಸ ಮಾಡಿಕೊಡುತ್ತಿದ್ದರು. ಇದನ್ನು ನೋಡಿದ ವ್ಯಕ್ತಿಯೊಬ್ಬರು ಅವರ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಅಂದಿನ ಭ್ರಷ್ಟಾಚಾರ ನಿಗ್ರಹದಳದವರು ಮಲ್ಲೇಶ ಜೆ ಅವರ ಮೇಲೆ ದಾಳಿ ನಡೆಸಿದ್ದರು. ಹಣ ಪಡೆಯುವಾಗಲೇ ಮಲ್ಲೇಶ ಜೆ ಸಿಕ್ಕಿ ಬಿದ್ದಿದ್ದರು. ಪೊಲೀಸರು ಅವರನ್ನು ಜೈಲಿಗೆ ಕಳುಹಿಸಿದ್ದು, ಕೆಲ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ಸದ್ಯ ಕಾರವಾರದ ವಿಶೇಷ ಮತ್ತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆಸಿತು.
ಶಿರಸಿಯ ಸರ್ವೇಯರ್ ಮಲ್ಲೇಶ ಜೆ ಅಪರಾಧ ಸಾಭೀತಾಗಿದ್ದರಿಂದ ಶಿಕ್ಷೆ ಪ್ರಕಟಿಸಿತು. ನ್ಯಾಯಾಂಗ ಬಂಧನದಲ್ಲಿದ್ದ ದಿನವನ್ನು ಕಡಿತಗೊಳಿಸಿ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶಿಸಿತು. ದಂಡ ಪಾವತಿ ಮಾಡದೇ ಇದ್ದರೆ ಹೆಚ್ಚುವರಿ 3 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆಯೂ ಆದೇಶಿಸಿತು.
ಭ್ರಷ್ಟರ ವಿರುದ್ಧ ನೀವು ದೂರು ಕೊಡಿ!
ಭ್ರಷ್ಟಾಚಾರದ ವಿರುದ್ಧ ನೀವು ದೂರು ಲೋಕಾಯುಕ್ತರಿಗೆ ದೂರು ಕೊಡಬಹುದು. ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲು ಲಂಚಕ್ಕೆ ಬೇಡಿಕೆ, ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಅನಗತ್ಯ ವಿಳಂಬ, ಸರ್ಕಾರಿ ಹಣ ದುರುಪಯೋಗ, ಕರ್ತವ್ಯ ಲೋಪ, ಕಳಪೆ ಕಾಮಗಾರಿ ವಿರುದ್ಧ ಯಾರೂ ಬೇಕಾದರೂ ಲೋಕಾಯುಕ್ತರ ಗಮನಕ್ಕೆ ತರಬಹುದು.
ಸರ್ಕಾರಿ ಅಧಿಕಾರಿ ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ನಮೂನೆ-1 ಮತ್ತು 2ರಲ್ಲಿ ಬರೆದು ಕೊಡಲು ಅವಕಾಶವಿದೆ. ಇಂಥ ಅರ್ಜಿ ಸ್ವೀಕಾರಕ್ಕಾಗಿ ಲೋಕಾಯುಕ್ತರು ಆಗಾಗ ಉತ್ತರ ಕನ್ನಡ ಜಿಲ್ಲಾ ಸಂಚಾರ ನಡೆಸುತ್ತಿದ್ದು, ಏ 16ರಂದು ಕುಮಟಾಗೆ ಭೇಟಿ ನೀಡಿ ಜನರ ಅಹವಾಲು ಆಲಿಸಲಿದ್ದಾರೆ. ಅಂದು ಬೆಳಿಗ್ಗೆ 11 ಗಂಟೆಯಿoದ ಮಧ್ಯಾಹ್ನ 1 ಗಂಟೆಯವರೆಗೆ ಕುವiಟಾ ತಾಲೂಕು ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಾತಿಗೆ ಸಿಗಲಿದ್ದಾರೆ. ಇದಲ್ಲದೇ ಬೇರೆ ತಾಲೂಕಿನವರು ಸಹ ಫೋನ್ ಮಾಡಿ, ವಿವರ ಪಡೆಯಲು ಅವಕಾಶವಿದೆ.
ಕಚೇರಿ ಅವಧಿಯಲ್ಲಿ ಫೋನ್ ಮಾಡಬೇಕಾದ ಸಂಖ್ಯೆ: 08382-295293, 220198, 222250, 222022, 229988