ಕಾರವಾರದ ಸಾಯಿ ಮಂದಿರದಲ್ಲಿ ಕಳ್ಳತನ ನಡೆದಿದೆ. ಮಂದಿರದ ಒಳಗೆ ನುಗ್ಗಿದ ಕಳ್ಳ ಅಲ್ಲಿದ್ದ ಬೆಳ್ಳಿ ಆಭರಣ ದೋಚಿ ಪರಾರಿಯಾಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಾರವಾರದ ಸಾಯಿಕಟ್ಟಾದಲ್ಲಿ ಸಾಯಿ ಮಂದಿರವಿದೆ. ಅಪಾರ ಪ್ರಮಾಣದ ಭಕ್ತರು ಇಲ್ಲಿ ನಡೆದುಕೊಳ್ಳುತ್ತಾರೆ. ವಿವಿಧ ಧಾರ್ಮಿಕ ಚಟುವಟಿಕೆಗಳ ಜೊತೆ ಸಾಯಿ ಮಂದಿರದಿoದ ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ. ಸಾಯಿ ಮಂದಿರದ ದೇವರ ದರ್ಶನಕ್ಕೆ ನಿತ್ಯ ನೂರಾರು ಜನ ಬರುತ್ತಾರೆ. ಗುರುವಾರದ ದಿನ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗುತ್ತದೆ.
ಮಂಗಳವಾರ ನಸುಕಿನಲ್ಲಿ ಸಾಯಿ ಮಂದಿರದಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಕಾಲಿಗೆ ಬೂಟು ಧರಿಸಿ ಬಂದ ಇಬ್ಬರು ಸಾಯಿ ಮಂದಿರದ ದೇವರ ಜಾಗವನ್ನು ಬೂಟುಗಾಲಿನಿಂದ ತುಳಿದಿದ್ದಾರೆ. ಸಾಯಿಮೂರ್ತಿಯಿದ್ದ ಆಸನದ ಮೇಲೆ ಕಾಲಿಟ್ಟು ಕಳ್ಳತನ ನಡೆಸಿದ್ದಾರೆ. ಆ ಇಬ್ಬರು ಆಗಂತುಕರು ಸಾಯಿ ಮಂದಿರ ಪೂರ್ತಿ ಓಡಾಟ ನಡೆಸಿ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸೋಮವಾರ ಸಾಯಿ ಮಂದಿರದ ಎದುರಿನ ಮೈದಾನದಲ್ಲಿ ಕ್ರಿಕೆಟ್ ಆಯೋಜಿಸಲಾಗಿತ್ತು. ರಾತ್ರಿ 2ಗಂಟೆಯವರೆಗೂ ಪಂದ್ಯಾವಳಿ ನಡೆದಿತ್ತು. ಅದರ ಮುಕ್ತಾಯದವರೆಗೂ ಕಾದ ಕಳ್ಳರು ಜನ ಕಡಿಮೆಯಾದ ನಂತರ ಮಂದಿರಕ್ಕೆ ನುಗ್ಗಿ ಕಳ್ಳತನ ನಡೆಸಿದ್ದಾರೆ. ಸಾಯಿ ಮಂದಿರದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಅಲ್ಲಿದ್ದ ಬೆಳ್ಳಿ ಸಾಮಗ್ರಿಗಳನ್ನು ದೋಚಿದ್ದಾರೆ.
ಸಾಯಿಬಾಬಾ ವಿಗ್ರಹದ ಅಕ್ಕಪಕ್ಕದಲ್ಲಿದ್ದ ಬೆಳ್ಳಿಯ ಸಿಂಹವನ್ನು ಕದ್ದಿದ್ದಾರೆ. ಅಲ್ಲಿದ್ದ ಪಾದುಕೆ, ಛತ್ರಿಯನ್ನು ಸಹ ಬಿಟ್ಟಿಲ್ಲ. ಮಂಗಳವಾರ ಬೆಳಗ್ಗೆ ದೇವರ ಪೂಜೆಗೆ ಬಂದ ಅರ್ಚಕರಿಗೆ ಕಳ್ಳತನ ನಡೆದಿರುವುದು ಅರಿವಿಗೆ ಬಂದಿದೆ. ಅಂದಾಜು 12 ಕೆಜಿ ಬೆಳ್ಳಿ ಸಾಮಗ್ರಿಗಳು ಕಳ್ಳರ ಪಾಲಾಗಿದೆ. ಈ ಬಗ್ಗೆ ಅಲ್ಲಿನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿ ಕ್ಯಾಮರಾ ದಾಖಲೆ ಪರಿಶೀಲನೆ ಆಧಾರದಲ್ಲಿ ಕಳ್ಳರ ಹುಡುಕಾಟ ನಡೆದಿದೆ.