ಸಿದ್ದಾಪುರದ ಭಗತ್ ಸಿಂಗ್ ಸರ್ಕಲಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಬಾಲರಾಜ ನಾಡರ್ ಅವರನ್ನು ಮೂರು ಆಸ್ಪತ್ರೆಗಳಿಗೆ ತೋರಿಸಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಭಾನುವಾರ ಬೆಳಗ್ಗೆ ಅವರು ಸಾವನಪ್ಪಿದ್ದಾರೆ.
ಸಿದ್ದಾಪುರ ರವೀಂದ್ರ ನಗರದ ಬಾಲರಾಜ ನಾಡರ್ (40) ಅವರು ಮಾರ್ಚ 29ರ ರಾತ್ರಿ ಅಪಘಾತಕ್ಕೀಡಾಗಿದ್ದರು. ಸಿದ್ದಾಪುರದ ಭಗತ್ ಸಿಂಗ್ ಸರ್ಕಲಿನಲ್ಲಿ ಅವರು ಕಾರಿಗೆ ತಮ್ಮ ಬೈಕ್ ಗುದ್ದಿದ್ದರು. ಗಾಯಗೊಂಡ ಬಾಲರಾಜ ನಾಡರ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅದಾದ ನಂತರ ಮಂಗಳೂರಿನ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಏಪ್ರಿಲ್ 12ರಂದು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಅವರನ್ನು ಕರೆತರಲಾಯಿತು. ಏಪ್ರಿಲ್ 14ರಂದು ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದರು. ಈ ಬಗ್ಗೆ ಬಾಲರಾಜ ನಾಡರ್ ಅವರ ಪತ್ನಿ ಚೇತನ ನಾಡರ್ ಮಾಹಿತಿ ನೀಡಿದರು.
ಬೋಟಿನಲ್ಲಿ ಸಿಗಲಿಲ್ಲ ಬೀರಬಲ್ಲನ ಶವ!
ಮೀನುಗಾರಿಕೆಗಾಗಿ ಅಂಕೋಲಾಗೆ ಆಗಮಿಸಿದ್ದ ಛತ್ತಿಸಘಡದ ಬೀರಬಲ್ (24) ಬೋಟಿನಿಂದ ನೀರಿಗೆ ಬಿದ್ದು ಸಾವನಪ್ಪಿದ್ದು, ಮಂಜುಗುಣಿಯಲ್ಲಿ ಅವರ ಶವ ಸಿಕ್ಕಿದೆ.
ಏಪ್ರಿಲ್ 12ರಂದು ಮೀನುಗಾರಿಕೆಗೆ ಹೋಗಿದ್ದ ಬೀರಬಲ್ ಆ ದಿನ ರಾತ್ರಿ ರಾತ್ರಿ 1.30ಕ್ಕೆ ಬೋಟಿನಲ್ಲಿ ಮಲಗಿದ್ದರು. `ಸಿಗಂದೂರು ಚೌಡೇಶ್ವರಿ’ ಎಂಬ ಬೋಟಿನಲ್ಲಿ ಅವರು ತಂಗಿದ್ದರು. ರಾತ್ರಿ 11 ಗಂಟೆ ಆಸುಪಾಸಿನಲ್ಲಿ ಅವರು ನೀರಿಗೆ ಬಿದ್ದರು. ಈ ವಿಷಯ ಅರಿತು ಅಲ್ಲಿನವರು ಸಾಕಷ್ಟು ಹುಡುಕಾಟ ನಡೆಸಿದರು. ಆದರೆ, ಆ ವೇಳೆ ಪತ್ತೆ ಆಗಲಿಲ್ಲ. ಏಪ್ರಿಲ್ 14ರಂದು ಮಂಜಗುಣಿ ಬೀಚಿನಲ್ಲಿ ಶವ ಕಾಣಿಸಿತು.
ಸರಾಯಿ ಕುಡಿದವನಿಗೆ ಮಾವಿನಕಾಯಿ ಮೇಲೆ ಆಸೆ: ಮರದಿಂದ ಬಿದ್ದು ಸಾವು!
ಕಾರವಾರದ ಶಿರವಾಡದಲ್ಲಿ ವಾಸವಾಗಿದ್ದ ಬಸವರಾಜ ವಡ್ಡರ್ (50) ಮಾವಿನ ಮರದಿಂದ ಬಿದ್ದು ಸಾವನಪ್ಪಿದ್ದಾರೆ.
ಹಳಿಯಾಳದ ಬಸವರಾಜ ವಡ್ಡರ್ ಕಾರವಾರದಲ್ಲಿ ವಾಸವಾಗಿದ್ದರು. ಗೌಂಡಿ ಕೆಲಸ ಮಾಡಿಕೊಂಡಿದ್ದ ಅವರು ಶಿರವಾಡದಲ್ಲಿ ಅವರು ಮನೆ ಮಾಡಿಕೊಂಡಿದ್ದರು. ಮನೆ ಹಿಂದೆ ಮಾವಿನ ಮರವಿತ್ತು. ಏಪ್ರಿಲ್ 13ರಂದು ಸರಾಯಿ ಕುಡಿದ ಅವರು ಮಾವಿನ ಮರ ಏರುವ ಪ್ರಯತ್ನ ಮಾಡಿದರು. 20 ಅಡಿ ಎತ್ತರದವರೆಗೂ ಏರಿ ಮಾವಿನ ಕಾಯಿ ಕೊಯ್ದರು.
ಆ ವೇಳೆ ಆಕಸ್ಮಿಕವಾಗಿ ಅವರ ಕಾಲು ಜಾರಿತು. ನೆಲಕ್ಕೆ ಬಿದ್ದ ಬಸವರಾಜ ವಡ್ಡರ್ ಅವರ ತಲೆ ಹಿಂದೆ ಭಾರೀ ಪ್ರಮಾಣದಲ್ಲಿ ಪೆಟ್ಟಾಯಿತು. ರಕ್ತ ಸುರಿಯುತ್ತಿರುವುದನ್ನು ನೋಡಿದ ಕುಟುಂಬದವರು ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಆದರೆ, ಬಸವರಾಜ ವಡ್ಡರ್ ಅಷ್ಟರೊಳಗೆ ಕೊನೆ ಉಸಿರೆಳೆದಿದ್ದರು. ಹಳಿಯಾಳದ ಸಿದ್ದರಾಮೇಶ್ವರಗಲ್ಲಿಯಲ್ಲಿದ್ದ ಅವರ ಪುತ್ರ ಶ್ರೀಕಾಂತ ವಡ್ಡರ್ ಕಾರವಾರಕ್ಕೆ ಆಗಮಿಸಿ, ಪೊಲೀಸ್ ದೂರು ನೀಡಿದರು. ಅದಾದ ನಂತರ ಶವ ಪಡೆದರು.