ಹೊನ್ನಾವರ ಮಂಕಿ ದೇವರಗದ್ದೆಯ ನಾರಾಯಣ ಖಾರ್ವಿ (64) ಅವರು ಮೀನುಗಾರಿಕೆಗೆ ತೆರಳಿದಾಗ ಸಮುದ್ರದಲ್ಲಿ ಬಿದ್ದು ಸಾವನಪ್ಪಿದ್ದಾರೆ. ಏಪ್ರಿಲ್ 14ರಂದು `ಮಂಗಳಾದೇವಿ’ ಎಂಬ ಪಾತಿದೊಣಿ ಮೂಲಕ ಅವರು ಅರಬ್ಬಿ ಸಮುದ್ರಕ್ಕೆ ಹೋಗಿದ್ದರು. ಮೀನು ಹಿಡಿಯುವಾಗ ಒಮ್ಮೆಲೆ ಬಂದ ಅಲೆಗೆ ಸಿಲುಕಿ ದೋಣಿ ಮುಗುಚಿದ್ದು, ಆಗ ಕೈಯಲ್ಲಿದ್ದ ಬಲೆ ಕಾಲಿಗೆ ಸುತ್ತಿಕೊಂಡಿದೆ. ನೀರಿನಿಂದ ಮೇಲೆ ಬರಲಾರದೇ ನಾರಾಯಣ ಖಾರ್ವಿ ಸಾವನಪ್ಪಿದ್ದಾರೆ. ಅದೇ ಊರಿನ ಮೋಹನ ಖಾರ್ವಿ ಈ ಬಗ್ಗೆ ಹೊನ್ನಾವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಕ್ರಮ ಸರಾಯಿ ಮಾರಾಟಕ್ಕೆ ತಡೆ
ಶಿರಸಿ ಹುತ್ಗಾರ್ ಬಳಿಯ ಮಾಣಿಗದ್ದೆ ಗೋಪಾಲ ಗೌಡ ಮಾಡುತ್ತಿದ್ದ ಅಕ್ರಮಗಳಿಗೆ ಪೊಲೀಸರು ತಡೆ ಒಡ್ಡಿದ್ದಾರೆ. ಶಿರಸಿ ಶಹರದ ರಾಮನಗರದಲ್ಲಿ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾಗ ಗೋಪಾಲ ಗೌಡ ಸಿಕ್ಕಿ ಬಿದ್ದಿದ್ದಾರೆ. ಏಪ್ರಿಲ್ 14ರಂದು ಗೋಪಾಲ ಗೌಡ ಅವರ ಬಳಿಯಿದ್ದ ಹಣ ಹಾಗೂ ಸರಾಯಿ ಪ್ಯಾಕೇಟನ್ನು ಪಿಎಸ್‌ಐ ನಾಗಪ್ಪ ಬಿ ಅವರು ವಶಕ್ಕೆ ಪಡೆದಿದ್ದಾರೆ.
ಮಕ್ಕಳಿಂದ ದೂರವಾದ ಮಹಿಳೆ
ಕುಮಟಾದ ತದಡಿಯಲ್ಲಿ ಮಹಿಳೆಯೊಬ್ಬರು ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸವಿತಾ ಪುರುಷೋತ್ತಮ ನಾಯ್ಕ (35) ನೇಣಿಗೆ ಶರಣಾದ ಮಹಿಳೆ. ಸವಿತಾ ಅವರು ಒಂದುವರೆ ತಿಂಗಳ ಮಗು ಹಾಗೂ ಆರು ವರ್ಷದ ಪುತ್ರನನ್ನು ಅಗಲಿದ್ದಾರೆ. ಅವರ ಸಾವಿಗೆ ಕಾರಣ ಗೊತ್ತಾಗಿಲ್ಲ.
ರೈತನ ಮನೆಗೆ ಕನ್ನ!
ಶಿರಸಿ ಬನವಾಸಿ ಬಳಿಯ ನರೂರಿನಲ್ಲಿ ರೈತಾಪಿ ಕೆಲಸ ಮಾಡಿಕೊಂಡಿದ್ದ ಚಂದ್ರ ನಾಯ್ಕ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಏಪ್ರಿಲ್ 14ರಂದು ಅವರು ಮನೆಯಲ್ಲಿ ಇಲ್ಲದ ವೇಳೆ ಮುಂದಿನ ಬಾಗಿಲನ್ನು ಕಳ್ಳರು ಒಡೆದಿದ್ದಾರೆ. ಮನೆ ಒಳಗಿದ್ದ ಕಪಾಟನ್ನು ಮುರಿದು 1.25 ಲಕ್ಷ ರೂ ಹಣವನ್ನು ಎಗರಿಸಿದ್ದಾರೆ. ಹಗಲಿನಲ್ಲಿಯೇ ಈ ಕಳ್ಳತನ ನಡೆದಿದ್ದು, ಕಳ್ಳರ ಪತ್ತೆಗಾಗಿ ಚಂದ್ರ ನಾಯ್ಕ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ರೆಸಾರ್ಟ ರೂಮಿನಲ್ಲಿ ಅಂದರ್ ಬಾಹರ್!
ಜೊಯಿಡಾ ಬಳಿಯ ರಾಮನಗರದಲ್ಲಿ ರೆಸಾರ್ಟಿನಲ್ಲಿ ನಡೆಯುತ್ತಿದ್ದ ಕಾನೂನುಬಾಹಿರ ಆಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ. ಮಹಾರಾಷ್ಟçದ ಮಂಜೂರ ಅಲಿ, ಶೋಹಲ್ ಅತ್ತಾರ್, ಅನೀಲ ಖೈರಮೋಡೆ, ಸರ್ಫರಾಜ ಇನಾಂಧರ್, ಅವಿನಾಶ ಉಪಾಧ್ಯಾಯ ಎಂಬಾತರು ಸಿಕ್ಕಿ ಬಿದ್ದಿದ್ದಾರೆ. ಅವರೆಲ್ಲರೂ ಗಣೇಶಗುಡಿಯ ಬೆಟಲ್ ನೆಸ್ಟ್ ಹೋಂ ಸ್ಟೇ ಅಲ್ಲಿ ರೂಂ ಪಡೆದಿದ್ದರು. ಅಲ್ಲಿ ಇಸ್ಪಿಟ್ ಎಲೆಗಳ ಮೇಲೆ ಹಣ ಕಟ್ಟಿ ಆಟವಾಡುತ್ತಿದ್ದರು. ಪೊಲೀಸರು ದಾಳಿ ನಡೆಸಿದಾಗ ನೀಲಿ ಬಣ್ಣದ ಚಾದರದ ಮೇಲೆ 11570ರೂ ಹರಡಿಕೊಂಡಿತ್ತು. ಈ ಹಿನ್ನಲೆ ಜೊಯಿಡಾ ಸಿಪಿಐ ಚಂದ್ರಶೇಖರ್ ಹರಿಹರ್ ಕಾನೂನು ಕ್ರಮ ಜರುಗಿಸಿದರು.
ನೀರಿಗೆ ಬಿದ್ದ ಕೂಲಿ ಕಾರ್ಮಿಕ
ಗೋಕರ್ಣ ಬಳಿಯ ಸಾಣಿಕಟ್ಟಾದ ಉಪ್ಪಿನ ಆಗರದಲ್ಲಿ ಕೆಲಸ ಮಾಡಿಕೊಂಡಿದ್ದ ಚೌಡಗೇರಿಯ ಜಾಣ ಸಣ್ಣು ಗೌಡ (55) ಸಾವನಪ್ಪಿದ್ದಾರೆ. ಕೂಲಿ ಕೆಲಸ ಮುಗಿಸಿ ವಿಶ್ರಾಂತಿಗಾಗಿ ಜಂತ್ರೋಡಿ ಮೇಲೆ ಕುಳಿತಿದ್ದಾಗ ಆಯತಪ್ಪಿ ನೀರಿಗೆ ಬಿದ್ದು ಅವರು ಕೊನೆ ಉಸಿರೆಳೆದಿದ್ದಾರೆ.
ಮೋರಿಗೆ ಬಿದ್ದ ಕಾರು!
ಶಿರಸಿ-ಕುಮಟಾ ರಸ್ತೆಯಲ್ಲಿ ರಾತ್ರಿ ವೇಳೆ ಕಾರು ಓಡಿಸುತ್ತಿದ್ದ ಶಿರಸಿ ಅಯ್ಯಪ್ಪನಗರದ ಗಜಾನನ ಅಂಬಿಗ ಅವರ ಕಾರು ಮೋರಿಗೆ ಬಿದ್ದಿದೆ. ಏಪ್ರಿಲ್ 5ರಂದು ಬಂಡಲ್ ಸಮೀಪದ ಬಡಗಿ ಕ್ರಾಸಿನ ಬಳಿ ಅವರು ತಮ್ಮ ಕಾರನ್ನು ಕಾಲುವೆಗೆ ಹಾರಿಸಿದ್ದಾರೆ. ಇದರಿಂದ ಕಾರು ಜಖಂ ಆಗಿದೆ. ಶಿರಸಿ ಗಣೇಶ ನಗರದ ಶಾಂತರಾಮ ಶೆಟ್ಟಿ ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.





